ಚಿತ್ತಾಪುರ: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ಅವರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವು ಸತ್ಯಕ್ಕೆ ದೂರವಾಗಿದ್ದು, ಇದು ಕೇವಲ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಮತ್ತು ಅವರ ದಶಕಗಳ ಭಕ್ತಿಯ ಪರಂಪರೆಯನ್ನು ಮಣ್ಣುಪಾಲು ಮಾಡುವ ಒಂದು ವ್ಯವಸ್ಥಿತ ಪಿತೂರಿಯಾಗಿದೆ ಎಂದು ಕೋಲಿ ಸಮಾಜದ ಯುವ ಅಧ್ಯಕ್ಷರಾದ ರಾಜೇಶ್ ಹೋಳಿಕಟ್ಟಿ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಘಟನೆಯ ಸತ್ಯಾಸತ್ಯತೆಗಳನ್ನು ಸಮಾಜದ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಹಳೆಯ ವಿಡಿಯೋ ಬಳಸಿ ವ್ಯವಸ್ಥಿತ ಅಪಪ್ರಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಕುರಿತು ಸ್ಪಷ್ಟನೆ ನೀಡಿರುವ ರಾಜೇಶ್ ಹೋಳಿಕಟ್ಟಿ, "ಆ ವಿಡಿಯೋ ಇತ್ತೀಚಿನದ್ದಲ್ಲ, ಅದು ಬಹಳ ಹಳೆಯದು. ವಿಡಿಯೋದಲ್ಲಿರುವ ಬಾಲಕಿ ಮಲ್ಲಿಕಾರ್ಜುನ ಮುತ್ಯಾ ಅವರ ಹತ್ತಿರದ ಸಂಬಂಧಿಯಾಗಿದ್ದಾಳೆ. ಕೇವಲ ಕೌಟುಂಬಿಕ ಭಿನ್ನಾಭಿಪ್ರಾಯ ಅಥವಾ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೆಲವರು ಈ ಹಳೆಯ ದೃಶ್ಯಗಳನ್ನು ಈಗ ವೈರಲ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಮಾಜದಲ್ಲಿ ಅಶಾಂತಿ ಮೂಡಿಸಲು ಕೆಟ್ಟ ಪ್ರಯತ್ನ ನಡೆಸಿದ್ದಾರೆ," ಎಂದು ದೂರಿದ್ದಾರೆ.
"ಮಲ್ಲಿಕಾರ್ಜುನ ಮುತ್ಯಾ ಅವರು ಯಾವುದೇ ತಪ್ಪು ಮಾಡಿಲ್ಲ. ಅವರ ವಿರುದ್ಧ ವ್ಯವಸ್ಥಿತವಾಗಿ ಪಿತೂರಿ ನಡೆಸಲಾಗುತ್ತಿದೆ. ಘಟನೆಯ ಹಿಂದೆ ಕೌಟುಂಬಿಕ ಕಲಹಗಳು ಇರುವ ಸಾಧ್ಯತೆಯಿದ್ದು, ಕೇವಲ ವಿಡಿಯೋ ನೋಡಿ ಸತ್ಯಾಸತ್ಯತೆ ತಿಳಿಯುವ ಮೊದಲೇ ಅಪಪ್ರಚಾರ ಮಾಡುವುದು ಸರಿಯಲ್ಲ. ಈ ಪ್ರಕರಣದ ಹಿಂದೆ ಯಾರಿದ್ದಾರೆ ಮತ್ತು ವಿಡಿಯೋ ಹಂಚಿದವರ ಉದ್ದೇಶವೇನು ಎಂಬುದರ ಕುರಿತು ಗೋಗಿ ಪೊಲೀಸ್ ಠಾಣೆಯ ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಬೇಕು," ಎಂದು ಅವರು ಆಗ್ರಹಿಸಿದರು.
ಭಕ್ತ ಸಮೂಹಕ್ಕೆ ಧೈರ್ಯ ಮತ್ತು ಶಾಂತಿಯ ಸಂದೇಶ
ಮಲ್ಲಿಕಾರ್ಜುನ ಮುತ್ಯಾ ಅವರ ಲಕ್ಷಾಂತರ ಭಕ್ತರಿಗೆ ಧೈರ್ಯ ತುಂಬಿದ ಅವರು, "ಮುತ್ಯಾ ಅವರ ಮೇಲಿನ ಭಕ್ತಿ ಅಚಲವಾಗಿರಲಿ. ಭಕ್ತಾದಿಗಳು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗಬಾರದು ಅಥವಾ ವದಂತಿಗಳಿಗೆ ಕಿವಿಗೊಟ್ಟು ಧೃತಿಗೆಡಬಾರದು. ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಸತ್ಯವು ಎಂದಿಗೂ ಸಾಯುವುದಿಲ್ಲ, ಶೀಘ್ರದಲ್ಲೇ ತನಿಖೆಯಿಂದ ಮುತ್ಯಾ ಅವರು ನಿರ್ದೋಷಿಯಾಗಿ ಹೊರಬರಲಿದ್ದಾರೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಯಾವುದೇ ವ್ಯಕ್ತಿಯ ವೈಯಕ್ತಿಕ ಜೀವನದ ಹಳೆಯ ವಿಚಾರಗಳನ್ನು ಸಾರ್ವಜನಿಕವಾಗಿ ತಪ್ಪು ದಾರಿಯಲ್ಲಿ ಪ್ರಚೋದಿಸುವುದು ಕಾನೂನುಬಾಹಿರ. ಸತ್ಯ ತಿಳಿಯದೆ ಯಾರೂ ಕೂಡ ಈ ವಿಡಿಯೋಗಳನ್ನು ಹಂಚಬಾರದು ಮತ್ತು ಅಶಾಂತಿಗೆ ಕಾರಣವಾಗಬಾರದು," ಎಂದು ರಾಜೇಶ್ ಹೋಳಿಕಟ್ಟಿ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ