ಚಿತ್ತಾಪುರ: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ಅವರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವು ಒಂದು ವ್ಯವಸ್ಥಿತ ಪಿತೂರಿಯ ಭಾಗವಾಗಿದೆ ಎಂದು ಕೋಲಿ ಸಮಾಜದ ನಗರ ಅಧ್ಯಕ್ಷರು ಹಾಗೂ ಮುತ್ಯಾ ಅವರ ಪರಮ ಭಕ್ತರಾದ ಬಸವರಾಜ ಮೈನಾಳಕರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವೈರಲ್ ವಿಡಿಯೋ ಹಳೆಯದು ಮತ್ತು ಕೌಟುಂಬಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಇತ್ತೀಚಿನದ್ದಲ್ಲ, ಅದು ಹಳೆಯ ವಿಡಿಯೋ ಆಗಿದೆ. ಆ ವಿಡಿಯೋದಲ್ಲಿರುವ ಬಾಲಕಿ ಮುತ್ಯಾ ಅವರ ಹತ್ತಿರದ ಸಂಬಂಧಿಯಾಗಿದ್ದಾಳೆ. ಕೇವಲ ಕೌಟುಂಬಿಕ ಭಿನ್ನಾಭಿಪ್ರಾಯ ಅಥವಾ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೆಲವರು ಈ ವಿಡಿಯೋವನ್ನು ದುರುದ್ದೇಶಪೂರ್ವಕವಾಗಿ ವೈರಲ್ ಮಾಡಿದ್ದಾರೆ. ಸಮಾಜದಲ್ಲಿ ಅಶಾಂತಿ ಮೂಡಿಸಲು ಈ ರೀತಿ ಮಾಡಲಾಗಿದೆ ಎಂದು ಅವರು ದೂರಿದ್ದಾರೆ.
"ಮಲ್ಲಿಕಾರ್ಜುನ ಮುತ್ಯಾ ಅವರು ಯಾವುದೇ ತಪ್ಪು ಮಾಡಿಲ್ಲ. ಅವರ ವಿರುದ್ಧ ವ್ಯವಸ್ಥಿತವಾಗಿ ಪಿತೂರಿ ನಡೆಸಲಾಗುತ್ತಿದೆ. ಘಟನೆಯ ಹಿಂದೆ ಕೌಟುಂಬಿಕ ಕಲಹಗಳು ಇರುವ ಸಾಧ್ಯತೆಯಿದ್ದು, ಸತ್ಯಾಸತ್ಯತೆ ತಿಳಿಯುವ ಮೊದಲೇ ಈ ರೀತಿ ಅಪಪ್ರಚಾರ ಮಾಡುವುದು ಸರಿಯಲ್ಲ," ಎಂದು ಮೈನಾಳಕರ್ ಅಭಿಪ್ರಾಯಪಟ್ಟಿದ್ದಾರೆ.
ಮಲ್ಲಿಕಾರ್ಜುನ ಮುತ್ಯಾ ಅವರ ಭಕ್ತರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗಬಾರದು. ಸಮಾಜದಲ್ಲಿ ಶಾಂತಿ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಕಾನೂನಿನ ಮೇಲೆ ನಂಬಿಕೆಯಿರಲಿ, ಸತ್ಯವು ಶೀಘ್ರದಲ್ಲೇ ಹೊರಬರಲಿದೆ ಎಂದು ಅವರು ಭಕ್ತ ಸಮೂಹಕ್ಕೆ ಧೈರ್ಯ ತುಂಬಿದ್ದಾರೆ.
"ಮುತ್ಯಾ ಅವರ ಮೇಲಿನ ಭಕ್ತಿ ಅಚಲವಾಗಿರಲಿ. ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ ಶಾಂತಿಯಿಂದ ಇರೋಣ. ಒಳ್ಳೆಯ ಸಂದೇಶ ಸಮಾಜಕ್ಕೆ ತಲುಪಲಿ ಎಂಬುದು ನಮ್ಮ ಆಶಯ."
— ಬಸವರಾಜ ಮೈನಾಳಕರ್, ನಗರ ಅಧ್ಯಕ್ಷರು, ಕೋಲಿ ಸಮಾಜ ಚಿತ್ತಾಪುರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ