ಶೈಕ್ಷಣಿಕ ಅವಧಿ ಪ್ರಾರಂಭದಲ್ಲಿಯೇ ಯೋಜನೆಗಳು ಅನುಷ್ಠಾನವಾಗಲಿ.
ಚಿತ್ತಾಪುರ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ ಅನೇಕ ಯೋಜನೆಗಳು ಜಾರಿಗೊಳಿಸಿದೆ ಆದರೆ ಅವುಗಳು ಶೈಕ್ಷಣಿಕ ಅವಧಿ ಪ್ರಾರಂಭದಲ್ಲಿಯೇ ಅನುಷ್ಠಾನಗೊಂಡು ವಿದ್ಯಾರ್ಥಿಗಳಿಗೆ ತಲುಪುವಂತೆ ಆಗಬೇಕು ಎಂದು ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಹೇಳಿದರು.
ಪಟ್ಟಣದ ನಾಗಾವಿ ಕ್ಯಾಂಪಸ್‌ನಲ್ಲಿನ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶೂ-ಸಾಕ್ಸ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಶೈಕ್ಷಣಿಕ ಅವಧಿ ಪ್ರಾರಂಭವಾಗಿ ಅರ್ಧ ವರ್ಷ ಕಳೆದ ನಂತರ ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ-ಸಾಕ್ಸ್, ಪುಸ್ತಕಗಳು ವಿತರಿಸುತ್ತಿರುವುದರಿಂದ ಮಕ್ಕಳಿಗೆ ತೊಂದರೆ ಆಗುತ್ತಿದೆ ಹಾಗಾಗಿ ಸರಕಾರಗಳು ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಠಿಯಿಂದ ನಿಗದಿತ ಸಮಯದಲ್ಲಿ ಶಿಕ್ಷಣದ ಯೋಜನೆಗಳು ಮುಟ್ಟಿಸುವಂತದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಸರಕಾರ ಅನೇಕ ಯೋಜನೆಗಳು ಜಾರಿಗೊಳಿಸಿದೆ ಹೀಗಾಗಿ ವಿದ್ಯಾರ್ಥಿಗಳು ಸರಕಾರ ಸೌಲಭ್ಯಗಳನ್ನು ಪಡೆದುಕೊಂಡು ಶೈಕ್ಷಣಿಕವಾಗಿ ಅಭಿವೃದ್ದಿ ಸಾಧಿಸಬೇಕು
ಜೊತೆಗೆ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಮಯ ಪರಿಪಾಲನೆ ಮತ್ತು ಏಕಾಗ್ರತೆ ಸಂಪಾದಿಸುವ ಮೂಲಕ ಶಾಲೆಯಲ್ಲಿ ಶಿಕ್ಷಕರ ಮಾರ್ಗದರ್ಶನ ಹಾಗೂ ಮನೆಯಲ್ಲಿ ಪಾಲಕರ ಸಹಕಾರ ಮತ್ತು ಪ್ರೋತ್ಸಾಹವನ್ನು ಪಡೆದು ಸಾಧನೆಯ ಪಥದಲ್ಲಿ ಸಾಗಬೇಕು. ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕೆ ಬೇಕಾದ ವಿಷಯಗಳ ಕಡೆ ಗಮನ ಹರಿಸಬೇಕು ಹೊರತು ಅನಗತ್ಯ ಸಂಬಂಧಪಡದ ವಿಷಯಗಳ ಕಡೆ ಕಿವಿಗೊಡಬಾರದು ಎಂದು ಕಿವಿಮಾತು ಹೇಳಿದರು.
ಮುಖ್ಯಶಿಕ್ಷಕಿ ಶ್ರೀಮತಿ ಸುನಂದಾ ಬಾರಡ್, ಶಿಕ್ಷಕ ಶಿವಬಸಪ್ಪ ಗುತ್ತೇಪ್ಪನವರ್ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಈರಪ್ಪ ಭೋವಿ,ಪತ್ರಕರ್ತ ಎಂ.ಡಿ.ಮಶಾಕ್, ಶಿಕ್ಷಕರಾದ ಸಂತೋಷಕುಮಾರ ಜಮಾದಾರ, ಶಿವಪುತ್ರ ವಿ, ವೀಣಾ ಕುಂಬಾರ, ಹಣಮಂತ, ಜನ್ನತುಲ್ ಫೀರ್ದೋಸ್, ಮಮತಾ, ರೇಣುಕಾ ರೋಣದ್, ಫಾತೀಮಾ ಅನ್ನೀಸಾ, ಮೇಘಾ, ಸಿದ್ದಮ್ಮ ಇತರರು ಇದ್ದರು. ಶಿಕ್ಷಕ ಸಂಗಾರೆಡ್ಡಿ ನಿರೂಪಿಸಿ ವಂದಿಸಿದರು. ಇದೇ ಸಂದರ್ಭದಲ್ಲಿ ಪುರಸಭೆಯಿಂದ ಕಸದ ಡಬ್ಬಿಗಳನ್ನು ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಶಾಲೆಯ ಮುಖ್ಯಶಿಕ್ಷಕರಿಗೆ ಹಸ್ತಾಂತರ ಮಾಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ