ಭ್ರಷ್ಟ ಅಧಿಕಾರಿಗಳಿಗೆ ಜೈಲಿಗೆ ಹಾಕಿಸುವೆ: ಪ್ರಿಯಾಂಕ್ ಖರ್ಗೆ.
ಚಿತ್ತಾಪೂರ: ಕೆಕೆಆರ್ ಡಿಬಿಯಲ್ಲಿ ಅವ್ಯಾಹತವಾದ ಭ್ರಷ್ಟಾಚಾರ ನಡೆದಿದೆ. ಜನ ಸಾಮಾನ್ಯರ ದುಡ್ಡು ಲೂಟಿ ಮಾಡಿದ ಬ್ರಷ್ಟ ಅಧಿಕಾರಿಗಳನ್ನು ನಾವು ಅಧಿಕಾರಕ್ಕೆ ಬಂದ ನಂತರ ಜೈಲಿಗೆ ಕಳಿಸುತ್ತೇವೆ ಎಂದು ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಕೊರತೆ ಇಲ್ಲ. ನಮ್ಮಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಇದ್ದಾರೆ. ಬಿಜೆಪಿಯಲ್ಲಿ ಯಾರು ಇದ್ದಾರೆ? ಅಲ್ಲೇ ಇದ್ದ ಜಗದೀಶ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿಯನ್ನು ಕೀಳಾಗಿ ನಡೆಸಿಕೊಂಡಿದ್ದರಿಂದ ಅವರಿಬ್ಬರು ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಪಾಪ, ಯಡಿಯೂರಪ್ಪಗೆ ಕಣ್ಣೀರು ಹಾಕಿಸಿ ಸಿಎಂ ಹುದ್ದೆಯಿಂದ ಕೆಳಗಿಳಿಸಲಾಯಿತು. ಹೀಗಾಗಿ ಯಾವ ನಾಯಕರು ಅಲ್ಲಿದ್ದಾರೆ! ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರದ ಆಡಳಿತದಲ್ಲಿ ರೈತರ ರಸಗೊಬ್ಬರ, ಪೆಟ್ರೋಲ್, ಅಡುಗೆ ಅನಿಲ ಬೆಲೆ ದುಬಾರಿಯಾಗಿದೆ. ಪ್ರತಿ ಕುಟುಂಬದ ಯಜಮಾನನಿಗೆ ಸಂಸಾರದ ತೊಂದರೆ ನೀಗಿಸಲು ನಮ್ಮ ಪಕ್ಷ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ರೂ,2000 ನೀಡುತ್ತೇವೆ. 200 ಯೂನಿಟ್ ವಿದ್ಯುತ್ ನ್ನು ಉಚಿತವಾಗಿ ಗೃಹಜ್ಯೋತಿ ಯೋಜನೆಯಡಿಯಲ್ಲಿ ನೀಡುತ್ತೇವೆ. ನಿರುದ್ಯೋಗಿ ಪದವಿಧರ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುತ್ತೇವೆ. ಉದ್ಯೋಗ ಸಿಗುವವರೆಗೆ ಅಂತಹ ಯುವಕರಿಗೆ ಯುವ ನಿಧಿ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ರೂ, 3000 ಹಾಗೂ ಡಿಪ್ಲೋಮಾ ಮುಗಿದವರಿಗೆ ರೂ,1500 ನೀಡುತ್ತೇವೆ.
ಪ್ರತಿ ಕುಟುಂಬಕ್ಕೆ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಹತ್ತು ಕೆಜಿ ಅಕ್ಕಿ ಉಚಿತ ನೀಡುತ್ತೇವೆ. ಈ ನಾಲ್ಕು ಯೋಜನೆಗಳು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಾಗಿವೆ. ಈ ನಾಲ್ಕು ಯೋಜನೆಯಲ್ಲಿ ಮೂರಕ್ಕೆ ವಿರೋಧಿಸುವ ಬಿಜೆಪಿ ಅದರಲ್ಲೂ ಚಿತ್ತಾಪುರದ ಬಿಜೆಪಿ ನಾಯಕರು ಅನ್ನಭಾಗ್ಯಕ್ಕೆ ಒಪ್ಪಲಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಬಿಜೆಪಿಗರಿಗೆ ಸಮಾಜ ಕಲ್ಯಾಣ ಬೇಕಿಲ್ಲ ಸ್ವಯಂ ಕಲ್ಯಾಣ ಪ್ರಮುಖವಾಗಿದೆ. ಚಿತ್ತಾಪುರದಲ್ಲಿ ಬಿಜೆಪಿ ಆಯ್ಕೆ ಮಾಡಿಕೊಂಡಿರುವ ವ್ಯಕ್ತಿಯ ಹಿನ್ನೆಲೆ ಬಗ್ಗೆ ಯೋಚಿಸಿದಾಗ ಲೂಟಿಗೆ ಪರೋಕ್ಷವಾಗಿ ಬೆಂಬಲವಿದೆ ಎಂದು ಒಪ್ಪಿಕೊಂಡಂತಾಗುತ್ತದೆ. ಬಡವರಿಗೆ ಹಂಚಲು ಉದ್ದೇಶಿಸುವ ಅಕ್ಕಿ ಹಾಗೂ ಹಾಲಿನ ಪೌಡರ ಕದಿಯುವವರಿಗೆ ಟಿಕೇಟ್ ನೀಡಲಾಗಿದೆ. ಇದು ನಾನು ಹೇಳುತ್ತಿಲ್ಲ ಇದನ್ನು ಯಾದಗಿರಿಯ ಕೋರ್ಟ್ ಹೇಳಿದೆ. ನಿಮಗೆ ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮುಖ್ಯವಲ್ಲ. ನಿಮ್ಮ ಚುನಾವಣೆ ಹೋರಾಟ ಮೋದಿ, ಶಾ ಹಾಗೂ ಆರ್ ಎಸ್ ಎಸ್ ವಿರುದ್ದವಿರಬೇಕು ಎಂದು ಮನವಿ ಮಾಡಿದರು.
ಚಿತ್ತಾಪುರ ಹಿತಕಾಪಾಡುವುದು, ಇಲ್ಲಿನ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು, ಮಹಿಳೆಯರಿಗೆ ಸುರಕ್ಷತೆಯ ನೀಡುವುದಕ್ಕಾಗಿ ಈ ತಾಲೂಕಿನ ಮೊಮ್ಮಗನಾದ ನನ್ನಿಂದ ಮಾತ್ರ ಸಾಧ್ಯ ಯಾವ ಬಿಜೆಪಿ ಅಭ್ಯರ್ಥಿಯಿಂದ ಸಾಧ್ಯವಿಲ್ಲ ಹಾಗಾಗಿ ನನಗೆ ಆಶೀರ್ವಾದ ಮಾಡಿ ಎಂದು ಕೈ ಜೋಡಿಸಿ ಕೇಳಿಕೊಳ್ಳುತ್ತೇನೆ. ತಾಲೂಕಿನಲ್ಲಿ ಪ್ರಬುದ್ಧ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ನನಗೆ ಬಿಡಿ. ಹೋದ ಸಲವೂ ನನಗೆ ಆರಿಸಿ ತಂದಿದ್ದೀರಿ ಆದರೆ ಪಗಾರ ಕಡಿಮೆ ಮಾಡಿದ್ದೀರಿ ಆದರೆ ಈ ಸಲ ಜಾಸ್ತಿ ಪಗಾರ ನೀಡಿ. ಕನಿಷ್ಠ 25,000 ಮತಗಳ ಅಂತರದಲ್ಲಿ ನನ್ನನ್ನು ಗೆಲ್ಲಿಸಿ. ನಿಮ್ಮ ಹದಿನೈದು ದಿನ ನಿಮ್ಮ ಶ್ರಮ ನೀಡಿ ಆಮೇಲೆ ಮುಂದಿನ ಐದು ವರ್ಷದ ಅವಧಿ ನಿಮ್ಮ ಕಾಳಜಿ ನನಗೆ ಬಿಡಿ. ನಿಮ್ಮ ಅಭಿವೃದ್ದಿ ನನಗೆ ಸೇರಿದ್ದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ 500 ಕ್ಕೂ ಅಧಿಕ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷವನ್ನು ಹಲವಾರು ಕಾರ್ಯಕರ್ತರು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್, ಮಾಜಿ ಎಂಎಲ್‌ಸಿ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಬ್ಲಾಕ್ ಅಧ್ಯಕ್ಷ ಭೀಮಣ್ಣ ಸಾಲಿ, ನಾಗರೆಡ್ಡಿಗೌಡ ಪಾಟೀಲ್, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ಮರಗೋಳ, ಶಿವಾನಂದ ಪಾಟೀಲ್, ರೇವಣಸಿದ್ದಪ್ಪ ಮಾಸ್ಟರ್, ಬಸನಗೌಡ ಸಂಕನೂರ, ನೀಲಕಂಠರಾವ್ ಮೂಲಗೆ, ಎಸ್ ಬಿ ಕಾಮರೆಡ್ಡಿ, ಮಲ್ಲಿಕಾರ್ಜುನ ಕಾಳಗಿ, ಶೃತಿ ಪೂಜಾರಿ, ಮೈಮೊದ್ ಸಾಹೇಬ, ಶ್ರೀನಿವಾಸ ಸಾಗರ, ಅಜೀಜ್ ಸೇಠ, ಲಚ್ಚಪ್ಪ ಜಮಾದಾರ್, ರಾಜು ಕಪನೂರ್, ಚಂದ್ರಶೇಖರ ಕಾಶಿ, ಸಿದ್ದುಗೌಡ ಪಾಟೀಲ್, ಮುಕ್ತಾರ ಪಟೇಲ್, ಸೇರಿದಂತೆ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ