ಚಿತ್ತಾಪುರ: ತಾಲೂಕಿನ ಪ್ರಸಿದ್ಧ ಸುಕ್ಷೇತ್ರ ಶ್ರೀ ನಾಗಾವಿ ಯಲ್ಲಮ್ಮ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಶನಿವಾರ ಭಕ್ತಿ ಮತ್ತು ಪಾರದರ್ಶಕತೆಯ ನಡುವೆ ಜರುಗಿತು. ಬೆಳಿಗ್ಗೆ 11 ಗಂಟೆಗೆ ಆರಂಭವಾದ ಎಣಿಕೆ ಪ್ರಕ್ರಿಯೆಯು ಸತತವಾಗಿ ಸಂಜೆ 5 ಗಂಟೆಯವರೆಗೆ ನಡೆಯಿತು.
2025ರ ಆಗಸ್ಟ್ 4ರಿಂದ 2026ರ ಫೆಬ್ರವರಿ 21ರ ವರೆಗಿನ ಅವಧಿಯಲ್ಲಿ ಭಕ್ತರು ಸಮರ್ಪಿಸಿದ ಕಾಣಿಕೆಯಿಂದ ಒಟ್ಟು 14,73,160 ರೂಪಾಯಿ ಸಂಗ್ರಹವಾಗಿದೆ ಎಂದು ದೇವಸ್ಥಾನದ ಅಧ್ಯಕ್ಷರು ಹಾಗೂ ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.
ವಿದೇಶಿ ಕರೆನ್ಸಿ ಆಕರ್ಷಣೆ:
ಈ ಬಾರಿಯ ಹುಂಡಿ ಎಣಿಕೆಯಲ್ಲಿ ವಿಶೇಷವಾಗಿ ಮಲೇಷಿಯಾ ದೇಶದ ಕರೆನ್ಸಿ ಪತ್ತೆಯಾಗಿರುವುದು ಕಂಡುಬಂದಿದೆ. ಭಕ್ತರೊಬ್ಬರು ಮಲೇಷಿಯಾದ 1 ರಿಂಗಿಟ್ ಮುಖಬೆಲೆಯ 18 ನೋಟುಗಳನ್ನು ಹುಂಡಿಗೆ ಹಾಕಿದ್ದಾರೆ. ಭಾರತೀಯ ರೂಪಾಯಿ ಮೌಲ್ಯಕ್ಕೆ ಹೋಲಿಸಿದರೆ (1 ರಿಂಗಿಟ್ = 23.26 ರೂ.) ಇದರ ಒಟ್ಟು ಮೊತ್ತ 418.68 ರೂಪಾಯಿಗಳಾಗುತ್ತದೆ.
ಇದರ ಜೊತೆಗೆ ಮಲೇಷಿಯಾದ 10 ಸೇನ್ (Sen) ಮುಖಬೆಲೆಯ 2 ನಾಣ್ಯಗಳು ಕೂಡ ಲಭ್ಯವಾಗಿವೆ. ಅಂತರಾಷ್ಟ್ರೀಯ ಮಾರುಕಟ್ಟೆ ದರದ ಅನ್ವಯ 20 ಸೇನ್‌ನ ಮೌಲ್ಯ ಸುಮಾರು 4.65 ರೂಪಾಯಿಗಳಾಗಲಿದ್ದು, ವಿದೇಶಿ ಕರೆನ್ಸಿಯ ಒಟ್ಟು ಮೊತ್ತ ಅಂದಾಜು 423.33 ರೂಪಾಯಿಗಳಾಗಲಿದೆ.
ಈ ಕುರಿತು ಮಾಹಿತಿ ನೀಡಿದ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು, "ಹುಂಡಿಯಲ್ಲಿ ಸಂಗ್ರಹವಾದ ಈ ಮೊತ್ತವು ಸರ್ಕಾರಕ್ಕೆ ಸೇರಿದ್ದಾಗಿದ್ದು, ಇದನ್ನು ಕೃಷ್ಣಾ ಗ್ರಾಮೀಣ ಬ್ಯಾಂಕ್‌ನಲ್ಲಿ ಅಧಿಕೃತವಾಗಿ ಜಮಾ ಮಾಡಲಾಗುವುದು," ಎಂದು ತಿಳಿಸಿದರು.
ಸುದೀರ್ಘ 6 ಗಂಟೆಗಳ ಕಾಲ ನಡೆದ ಈ ಎಣಿಕೆ ಕಾರ್ಯದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಬ್ಯಾಂಕ್ ಅಧಿಕಾರಿಗಳು, ಪೋಲಿಸ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು.