ಚಿತ್ತಾಪುರ: ಪಟ್ಟಣದ ರಾವೂರ ರಸ್ತೆಯಲ್ಲಿ ಶ್ರೀ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾಗುತ್ತಿರುವ ಬಸವ ಭವನ ಹಾಗೂ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ವಸತಿ ನಿಲಯದ ಕಾಮಗಾರಿಗಳಿಗೆ ಬಸವ ಜಯಂತಿಯ ಶುಭ ದಿನದಂದು ಅಡಿಗಲ್ಲು ಹಾಕಲಾಗಿದ್ದು, ಮುಂದಿನ ವರ್ಷದೊಳಗೆ ಕಟ್ಟಡವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ತಿಳಿಸಿದರು.
ಸೋಮವಾರ ಹಮ್ಮಿಕೊಂಡಿದ್ದ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದ ಅವರು, "ಸಮಾಜದ ಹಿತದೃಷ್ಟಿಯಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ಕೆ ಈಗಾಗಲೇ ಹತ್ತು ಜನ ದಾನಿಗಳು ತಲಾ ಒಂದು ಕೊಠಡಿಯ ನಿರ್ಮಾಣಕ್ಕೆ ಧನಸಹಾಯ ನೀಡಲು ಮುಂದೆ ಬಂದಿದ್ದಾರೆ. ವಚನ ನೀಡಿದಂತೆ ಆಯಾ ಕೊಠಡಿಗಳಿಗೆ ದಾನಿಗಳ ಹೆಸರನ್ನೇ ಇಡಲಾಗುವುದು. ಶೀಘ್ರದಲ್ಲೇ ದಾನಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲಾಗುವುದು," ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅಡಿಗಲ್ಲು ನೆರವೇರಿಸಿದ ಕಂಬಳೇಶ್ವರದ ಶ್ರೀ ಸೋಮಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿ, "ಹುಟ್ಟು ಸಾವಿನ ನಡುವಿನ ಬದುಕಿನಲ್ಲಿ ಸಮಾಜಕ್ಕಾಗಿ ಉತ್ತಮ ಕಾರ್ಯ ಮಾಡುವುದು ಶ್ರೇಷ್ಠವಾದುದು. ಚಿತ್ತಾಪುರದಲ್ಲಿ ನಿರ್ಮಾಣವಾಗುತ್ತಿರುವ ಈ ಭವನ ಮತ್ತು ವಸತಿ ನಿಲಯಗಳು ಇಡೀ ಜಿಲ್ಲೆಗೆ ಮಾದರಿಯಾಗಲಿವೆ. ಸಮಾಜದ ಪ್ರತಿಯೊಬ್ಬರೂ ಈ ಕಾರ್ಯಕ್ಕೆ ಕೈಜೋಡಿಸಬೇಕು," ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ.ಪ್ರಭುರಾಜ ಕಾಂತಾ, ಅಣ್ಣಾರಾವ್ ಪಾಟೀಲ ಮುಡಬೂಳ, ಚಂದ್ರಶೇಖರ ಸಾತನೂರ, ಅಶೋಕ ನಿಪ್ಪಾಣಿ, ಮಲ್ಲಿಕಾರ್ಜುನರೆಡ್ಡಿ ಇಜಾರ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಟ್ರಸ್ಟ್ ಕಾರ್ಯದರ್ಶಿ ನಾಗರಾಜ ಭಂಕಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಬರೀಷ್ ಸುಲೇಗಾಂವ ಕಾರ್ಯಕ್ರಮ ನಿರೂಪಿಸಿದರೆ, ಅನಿಲ್ ವಡ್ಡಡಗಿ ವಂದಿಸಿದರು. ಚಂದ್ರುಗೌಡ ಬೆಳಗುಂಪಾ, ಎಸ್.ಎನ್.ಪಾಟೀಲ, ಶಾಂತಕುಮಾರ್ ಹತ್ತಿ, ಕುಂಬಾರ ಸಮಾಜದ ಅಧ್ಯಕ್ಷ ವಿಶ್ವನಾಥ ಕುಂಬಾರ, ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.