ಶುಕ್ರವಾರ, ಏಪ್ರಿಲ್ 24, 2026

ಚಿತ್ತಾಪುರಕ್ಕೆ ಸುಮಂತ ಮದಗುಂಟಿ ಪ್ರಥಮ:ಸ್ವಾಮಿ ವಿವೇಕಾನಂದ ಸಂಸ್ಥೆಗೆ ಸತತ 8ನೇ ಬಾರಿ ನೂರಕ್ಕೆ ನೂರು ಫಲಿತಾಂಶ.

ಚಿತ್ತಾಪುರ: ಗುಣಮಟ್ಟದ ಶಿಕ್ಷಣ ಮತ್ತು ಶಿಸ್ತಿನ ನೆಲೆಬೀಡಾಗಿರುವ ಇಲ್ಲಿನ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಸಂಚಾಲಿತ ವಿದ್ಯಾನಿಕೇತನ ಪ್ರೌಢ ಶಾಲೆಯು ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಶಾಲೆಯು ಸತತ 8ನೇ ವರ್ಷವೂ ಶೇ. 100ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ತನ್ನ ವಿಜಯಯಾತ್ರೆಯನ್ನು ಮುಂದುವರೆಸಿದೆ.

ಶಾಲೆಯ ವಿದ್ಯಾರ್ಥಿ ಸುಮಂತ ಮದಗುಂಟಿ ಒಟ್ಟು 625 ಅಂಕಗಳಿಗೆ 614 ಅಂಕಗಳನ್ನು (ಶೇ. 98.24) ಪಡೆಯುವ ಮೂಲಕ ಇಡೀ ಚಿತ್ತಾಪುರ ತಾಲೂಕಿಗೆ ಪ್ರಥಮ ಸ್ಥಾನ ಅಲಂಕರಿಸಿದ್ದಾನೆ. ಗ್ರಾಮೀಣ ಭಾಗದ ಈ ವಿದ್ಯಾರ್ಥಿಯ ಸಾಧನೆಗೆ ಇಡೀ ತಾಲೂಕು ಹೆಮ್ಮೆ ವ್ಯಕ್ತಪಡಿಸಿದೆ.

ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 68 ವಿದ್ಯಾರ್ಥಿಗಳೂ ಯಶಸ್ವಿಯಾಗಿ ಉತ್ತೀರ್ಣರಾಗಿದ್ದು, ಫಲಿತಾಂಶದ ವಿವರದಲ್ಲಿ ಅತ್ಯುನ್ನತ ಶ್ರೇಣಿ (Distinction): 40 ವಿದ್ಯಾರ್ಥಿಗಳು,ಪ್ರಥಮ ಶ್ರೇಣಿ (First Class): 26 ವಿದ್ಯಾರ್ಥಿಗಳು,ಒಟ್ಟಾರೆ ಶೇ. 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುವುದು ಶಾಲೆಯ ಬೋಧನಾ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.ಸತತ 8 ವರ್ಷಗಳಿಂದ 100% ಫಲಿತಾಂಶ ಕಾಯ್ದುಕೊಳ್ಳುವುದು ದೊಡ್ಡ ಮೈಲಿಗಲ್ಲಾಗಿದೆ. ಈ ಯಶಸ್ಸಿನ ಹಿಂದೆ ಶಾಲೆಯ ಮುಖ್ಯ ಗುರುಗಳಾದ ರಮೇಶ ಯಾದವಾಡ ಹಾಗೂ ಬೋಧಕ ಸಿಬ್ಬಂದಿಯ ಹಗಲಿರುಳಿನ ಶ್ರಮವಿದೆ. ವಿಶೇಷ ತರಗತಿಗಳು ಮತ್ತು ವೈಯಕ್ತಿಕ ಮಾರ್ಗದರ್ಶನ ಇಂದು ಶಾಲೆಯನ್ನು ಜಿಲ್ಲೆಯಲ್ಲೇ ಮಾದರಿಯಾಗಿಸಿದೆ.

ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀನಿವಾಸ ಪೇಂದು ಹಾಗೂ ಮಂಡಳಿಯ ಸರ್ವ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ. "ನಮ್ಮ ಶಾಲೆಯು ಕೇವಲ ಅಂಕಗಳಿಕೆಯನ್ನಷ್ಟೇ ಅಲ್ಲದೆ, ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ಇದು ಶಿಕ್ಷಕರ ಮತ್ತು ಪೋಷಕರ ಸಹಕಾರಕ್ಕೆ ಸಂದ ಜಯ," ಎಂದು ಅವರು ತಿಳಿಸಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ಮತ್ತು ಶಾಲಾ ತಂಡವನ್ನು ಪಟ್ಟಣದ ಗಣ್ಯರು ಹಾಗೂ ಸಾರ್ವಜನಿಕರು ಅಭಿನಂದಿಸಿದ್ದಾರೆ.

ಅದ್ಧೂರಿ ‘ಶ್ರೀ ಭಗೀರಥ ಮಹರ್ಷಿ ಜಯಂತಿ’ ಆಚರಣೆ.

​ಚಿತ್ತಾಪುರ: ಪಟ್ಟಣದ ಪ್ರಜಾ ಸೌಧದಲ್ಲಿ ಗುರುವಾರ ಮಾನ್ಯ ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ಶ್ರೀ ಭಗೀರಥ ಮಹರ್ಷಿ ಅವರ ಜಯಂತಿಯನ್ನು ಅತ್ಯಂತ ಸಡಗರ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.

​ಕಾರ್ಯಕ್ರಮದ ಕುರಿತು ಪ್ರಮುಖರಾದ ಅಂಬರೀಶ ಸುಲೇಗಾಂವ ಅವರು ಪ್ರಾಸ್ತವಿಕವಾಗಿ ಮಾತನಾಡಿ, "ತಮ್ಮ ಕಠಿಣ ತಪಸ್ಸಿನ ಮೂಲಕ ಗಂಗೆಯನ್ನು ಭೂಮಿಗೆ ತಂದ ಭಗೀರಥ ಮಹರ್ಷಿಗಳು ದೃಢ ಸಂಕಲ್ಪದ ಸಂಕೇತ. ಅವರ ಜೀವನ ಮತ್ತು ಸಾಧನೆ ಇಂದಿನ ಪೀಳಿಗೆಗೆ ಮಾದರಿಯಾಗಿದೆ," ಎಂದು ತಿಳಿಸಿದರು.

​ಅಧ್ಯಕ್ಷತೆಯ ನುಡಿಗಳನ್ನಾಡಿದ ತಹಸೀಲ್ದಾರ ನಾಗಯ್ಯ ಹಿರೇಮಠ ಮಹರ್ಷಿಗಳ ಜೀವನ ಸಂದೇಶವನ್ನು ಸ್ಮರಿಸುತ್ತಾ, ಸಮಾಜದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಅತ್ಯಗತ್ಯ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಉಪ್ಪಾರ ಸಮಾಜದ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಹಳ್ಳಿ, ಪ್ರಮುಖ ಮುಖಂಡರಾದ ಲಕ್ಷ್ಮಣ ಟಳ್ಳಿ, ಮಲ್ಲಿಕಾರ್ಜುನ ಉಪ್ಪಾರ, ಗೋವಿಂದಪ್ಪ ಜಡಿ, ಭೀಮರಾಯ ಉಪ್ಪಾರ, ಹಾಗೂ ಶರಣಪ್ಪ ಬೀಮನಹಳ್ಳಿ ಸೇರಿದಂತೆ ಸಮಾಜದ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಗುರುವಾರ, ಏಪ್ರಿಲ್ 23, 2026

ನಿಗಮದ ಅಧ್ಯಕ್ಷರಾಗಿ ಡಾ. ಶ್ರೀನಿವಾಸ್ ವೇಲು ಪದಗ್ರಹಣ: ಸಿಎಂಗೆ ಅಭಿನಂದನೆ ಸಲ್ಲಿಸಿದ ಸಮುದಾಯದ ಮುಖಂಡರು

ಬೆಂಗಳೂರು: ಕರ್ನಾಟಕ ರಾಜ್ಯ ಕುಂಬಾರ ಜನಾಂಗ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಡಾ. ಶ್ರೀನಿವಾಸ್ ವೇಲು ಅವರನ್ನು ನೇಮಕ ಮಾಡಿದ ಹಿನ್ನೆಲೆಯಲ್ಲಿ, ಸಮಸ್ತ ಕುಂಬಾರ ಸಮುದಾಯದ ಪರವಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೆಂಗಳೂರಿನ ಅವರ ಅಧಿಕೃತ ಗೃಹ ಕಚೇರಿ 'ಕಾವೇರಿ'ಯಲ್ಲಿ ಭೇಟಿ ಮಾಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮಾನ್ಯ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿಯವರು ಉಪಸ್ಥಿತರಿದ್ದು, ಸಮುದಾಯದ ಮುಖಂಡರೊಂದಿಗೆ ಶುಭ ಕೋರಿದರು. ತದನಂತರ ಸಂಜೆ ಬೆಂಗಳೂರಿನ ಡಿ. ದೇವರಾಜ ಅರಸು ಭವನದಲ್ಲಿ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕುಂಬಾರ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಆರ್. ಶ್ರೀನಿವಾಸ್, ಕೆ.ಎಸ್.ಆರ್.ಟಿ.ಸಿ ನಿರ್ದೇಶಕಿ ಗಾಯಿತ್ರಿ (IAS), ಅಖಿಲ ಭಾರತ ಕರ್ನಾಟಕ ಕುಂಬಾರ ಮಹಾಸಭಾದ ಅಧ್ಯಕ್ಷರಾದ ಶಿವಕುಮಾರ ಚೌಡ ಶೆಟ್ಟಿ, ಗೌರವಾಧ್ಯಕ್ಷರಾದ ಗುರುರಾಜ್, ಮಾಜಿ ಹೆಚ್ಚುವರಿ ಅಡ್ವಕೇಟ್ ಜನರಲ್ ದೇವದಾಸ್, ವಕೀಲರಾದ ಅನುಸೂಯಾ, ಡಾ. ಹೇಮಾವತಿ ಶ್ರೀನಿವಾಸ್ ವೇಲು ಹಾಗೂ ಸಮುದಾಯದ ಮುಖಂಡರಾದ ಸಂಗಮೇಶ, ಚಿಕ್ಕ ವೀರಯ್ಯ ಟಿ.ಎನ್, ವಿಠಲ್ ಶಂಕರ್ ಸೇರಿದಂತೆ ಹಲವು ಹಿತೈಷಿಗಳು ಭಾಗವಹಿಸಿದ್ದರು.

"ಅನಿವಾರ್ಯ ಕಾರಣಗಳಿಂದಾಗಿ ಬೆಂಗಳೂರಿನಲ್ಲಿ ನಡೆದ ನಮ್ಮ ಹೆಮ್ಮೆಯ ಸಮುದಾಯದ ನಾಯಕರಾದ ಡಾ. ಶ್ರೀನಿವಾಸ್ ವೇಲು ರವರ ಪದಗ್ರಹಣ ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗವಹಿಸಲು ಸಾಧ್ಯವಾಗಿಲ್ಲ. ನಮ್ಮ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಡಾ. ಶ್ರೀನಿವಾಸ್ ವೇಲು ರವರಿಗೆ ಈ ಜವಾಬ್ದಾರಿ ಸಿಕ್ಕಿರುವುದು ಅತ್ಯಂತ ಸಂತೋಷದ ವಿಷಯ. ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಅವರ ನೇತೃತ್ವದಲ್ಲಿ ಕುಂಬಾರ ನಿಗಮವು ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವಂತಾಗಲಿ ಎಂದು ಆಶಿಸುತ್ತೇನೆ. ಈ ನೇಮಕಾತಿ ಮಾಡಿದ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಬೆಂಬಲವಾಗಿ ನಿಂತ ಸಾರಿಗೆ ಸಚಿವರಿಗೆ ಧನ್ಯವಾದಗಳು."

ಜಗದೇವ ಎಸ್. ಕುಂಬಾರ,
ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ,ಅಖಿಲ ಭಾರತ ಕುಂಬಾರ ಮಹಾಸಭಾ ಬೆಂಗಳೂರ.

ಬುಧವಾರ, ಏಪ್ರಿಲ್ 22, 2026

ಸಮಾಜಕ್ಕಾಗಿ ಬದುಕಿದಾಗ ಮಾತ್ರ ಜೀವನ ಸಾರ್ಥಕ: ಹಿರೇಮಠ.

ಚಿತ್ತಾಪುರ: ನಮ್ಮ ಜೀವನವನ್ನು ಕೇವಲ ಸ್ವಂತಕ್ಕಾಗಿ ಸೀಮಿತಗೊಳಿಸದೆ ಸಮಾಜಕ್ಕಾಗಿ ಮುಡಿಪಾಗಿಟ್ಟಾಗ ಮಾತ್ರ ಅದು ಸಾರ್ಥಕತೆ ಪಡೆಯುತ್ತದೆ ಎಂದು ತಹಸೀಲ್ದಾ‌ರ್ ನಾಗಯ್ಯ ಹಿರೇಮಠ ಅವರು ಅಭಿಪ್ರಾಯಪಟ್ಟರು.

ಪಟ್ಟಣದ ಪ್ರಜಾ ಸೌಧದ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು "ನಾವು ಪ್ರತಿನಿತ್ಯ ಸ್ವಾರ್ಥಕ್ಕಾಗಿ ಬದುಕುತ್ತಿದ್ದೇವೆ. ಆದರೆ ಹಿಂದಿನ ಮಹಾಪುರುಷರು ಸಂಸಾರ ಮತ್ತು ಸಂಬಂಧಗಳನ್ನು ಬದಿಗಿಟ್ಟು ಸಮಾಜ ಹಾಗೂ ಧರ್ಮದ ಉಳಿವಿಗಾಗಿ ಶ್ರಮಿಸಿದ್ದಾರೆ. ತಮ್ಮ ಜೀವನವನ್ನೇ ಧಾರೆ ಎರೆದ ಕಾರಣಕ್ಕೆ ಇಂದು ನಾವು ಅವರ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸುತ್ತಿದ್ದೇವೆ. ಅವರ ತತ್ವ ಸಿದ್ಧಾಂತಗಳನ್ನು ಪಾಲಿಸುವ ಮೂಲಕ ನಾವು ಕೂಡ ಸಮಾಜಮುಖಿಯಾಗಿ ಬದುಕಬೇಕು," ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕುಮಾರಿ ಅಕ್ಷತಾ ಜಾನೀಬ್ ಅವರು ಶಂಕರಾಚಾರ್ಯರ ಜೀವನ ಚರಿತ್ರೆಯ ಕುರಿತು ಉಪನ್ಯಾಸ ನೀಡಿದರು. ವಿಪ್ರ ಸಮಾಜದ ಕೋಶಾಧ್ಯಕ್ಷ ಜಯಂತ ಮಾಲಗತ್ತಿ ಅವರು ಮಾತನಾಡಿ, ಶಂಕರಾಚಾರ್ಯರ ಕೊಡುಗೆಯನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ಅಶ್ವತ್ಥ ನಾರಾಯಣ ಕುಲಕರ್ಣಿ, ಉಪ ನೋಂದಣಾಧಿಕಾರಿ ಆನಂದರಾವ್ ಕುಲಕರ್ಣಿ ಸೇರಿದಂತೆ
ತಾಲೂಕು ಗೌರವ ಅಧ್ಯಕ್ಷ ದೇವಿದಾಸ್ ಕುಲಕರ್ಣಿ, ತಾಲೂಕು ಅಧ್ಯಕ್ಷರು ಗಿರೀಶ್ ಜಾನೀಬ್, ಉಪಾಧ್ಯಕ್ಷ ವಿಶ್ವನಾಥ ಅಫಜಲಪುರಕರ್, ಹಣಮೇಶ್ ಆಚಾರ್ಯ, ಭೀಮರಾವ್ ಅಫಜಲಪುರಕರ್, ಗೌತಮ್ ನಾಯಕ್, ಗೋಪಾಲ್ ಹಾಗೂ ವಿಪ್ರ ಸಮಾಜದ ಮಹಿಳಾ ಮುಖಂಡರಾದ ಸರೋಜಾ ಅಫಜಲಪುರಕರ್, ಶೃತಿ ಜಾನೀಬ್, ಸಕ್ಕುಬಾಯಿ ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮಂಗಳವಾರ, ಏಪ್ರಿಲ್ 21, 2026

ವೀರಶೈವ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಅಡಿಗಲ್ಲು; ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ.

ಚಿತ್ತಾಪುರ: ಪಟ್ಟಣದ ಸ್ಟೇಷನ್‌ ರಸ್ತೆಯಲ್ಲಿರುವ ವೀರಶೈವ ಸಮಾಜದ ನಿವೇಶನದಲ್ಲಿ ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸುಸಜ್ಜಿತ ಹಾಗೂ ಹವಾನಿಯಂತ್ರಿತ (AC) ವೀರಶೈವ ಕಲ್ಯಾಣ ಮಂಟಪದ ಅಡಿಗಲ್ಲು ಸಮಾರಂಭ ಸೋಮವಾರ ಅದ್ಧೂರಿಯಾಗಿ ನೆರವೇರಿತು.

ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ಅಡಿಗಲ್ಲು ನೆರವೇರಿಸಿ ಮಾತನಾಡಿ, "ಜಿಲ್ಲೆಯಲ್ಲೇ ಚಿತ್ತಾಪುರ ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ಸಂಘಟನೆ ಅತ್ಯಂತ ಬಲಿಷ್ಠವಾಗಿದೆ. ಈ ಭಾಗದಲ್ಲಿ ಸಮಾಜದ ಬಾಂಧವರಿಗಾಗಿ ಸುಸಜ್ಜಿತ ಕಲ್ಯಾಣ ಮಂಟಪ ಹಾಗೂ ವಿದ್ಯಾರ್ಥಿ ವಸತಿ ನಿಲಯದ ಅವಶ್ಯಕತೆ ಇತ್ತು. ಈ ಕಾರ್ಯಕ್ಕೆ ವೈಯಕ್ತಿಕವಾಗಿ ಹಾಗೂ ಜಿಲ್ಲಾ ಘಟಕದ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಲ್ಲದೆ, ಯೋಜನೆಯ ಯಶಸ್ಸಿಗೆ ಬೆನ್ನೆಲುಬಾಗಿ ನಿಲ್ಲುತ್ತೇನೆ," ಎಂದು ಭರವಸೆ ನೀಡಿದರು.

ಬಸವ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ರಮೇಶ್ ಮರಗೋಳ ಮಾತನಾಡಿ, "ಸಮಾಜದ ಮುಖಂಡರ ಆಶಯದಂತೆ ಈ ಸುಸಜ್ಜಿತ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗುತ್ತಿದೆ. ಇದಕ್ಕೆ ಬೇಕಾಗುವ 2 ಕೋಟಿ ರೂ. ಹಣವನ್ನು ಸಮಾಜದ ಮುಖಂಡರು ಮತ್ತು ದಾನಿಗಳಿಂದ ಸಂಗ್ರಹಿಸಲಾಗುವುದು. ಈಗಾಗಲೇ ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ ಅವರು 5 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಅನೇಕ ದಾನಿಗಳು ಸಹಾಯಕ್ಕೆ ಮುಂದೆ ಬಂದಿದ್ದು, ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ," ಎಂದರು.

ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿ, "ಪಟ್ಟಣದ ಹೃದಯ ಭಾಗದಲ್ಲಿ ಸಮಾಜಕ್ಕಾಗಿ ನಿವೇಶನ ಕಾಯ್ದಿರಿಸಿದ ಶಿವರಾವ್‌ ಪಾಟೀಲ ಬೆಳಗುಂಪಾ ಅವರ ಕಾರ್ಯ ಶ್ಲಾಘನೀಯ. ಸಮಾಜದ ಹಿತದೃಷ್ಟಿಯಿಂದ ರಾಜಕೀಯ ಪಕ್ಷಪಾತ ಮರೆತು ಎಲ್ಲರೂ ಒಗ್ಗೂಡಿರುವುದು ಸಂತಸದ ವಿಷಯ. ಈ ಭವನ ನಿರ್ಮಾಣವಾದ ನಂತರ ಬಡವರಿಗೂ ಕೈಗೆಟುಕುವ ದರದಲ್ಲಿ ಇದರ ಪ್ರಯೋಜನ ಸಿಗುವಂತಾಗಲಿ," ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ, ಮುಖಂಡರಾದ ವೀರಣ್ಣಗೌಡ ಪರಸರೆಡ್ಡಿ, ಶಿವಾನಂದ ಪಾಟೀಲ ಮರತೂರ, ಚಂದ್ರಶೇಖರ ಅವಂಟಿ, ಭೀಮಣ್ಣ ಸಾಲಿ ಮಾತನಾಡಿದರು.

ವೇದಿಕೆಯಲ್ಲಿ ತಾಲೂಕು ಗೌರವಾಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ, ಬಸವ ಜಯಂತಿ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಬೆಳಗುಂಪಾ, ಡಾ.ಪ್ರಭುರಾಜ ಕಾಂತಾ, ಸೋಮಶೇಖರ ಪಾಟೀಲ ಬೆಳಗುಂಪಾ, ರಾಜಶೇಖ‌ರ್ ತಿಮ್ಮನಾಯಕ ಸೇರಿದಂತೆ ಸಮಾಜದ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಶಾಂತಣ್ಣ ಚಾಳೀಕಾರ ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿನಿ ನಿಲಯಕ್ಕೆ ಅಡಿಗಲ್ಲು: ಮುಂದಿನ ವರ್ಷ ಉದ್ಘಾಟನೆ.

​ಚಿತ್ತಾಪುರ: ಪಟ್ಟಣದ ರಾವೂರ ರಸ್ತೆಯಲ್ಲಿ ಶ್ರೀ ಬಸವೇಶ್ವರ ಚಾರಿಟೇಬಲ್‌ ಟ್ರಸ್ಟ್ ವತಿಯಿಂದ ನಿರ್ಮಿಸಲಾಗುತ್ತಿರುವ ಬಸವ ಭವನ ಹಾಗೂ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ವಸತಿ ನಿಲಯದ ಕಾಮಗಾರಿಗಳಿಗೆ ಬಸವ ಜಯಂತಿಯ ಶುಭ ದಿನದಂದು ಅಡಿಗಲ್ಲು ಹಾಕಲಾಗಿದ್ದು, ಮುಂದಿನ ವರ್ಷದೊಳಗೆ ಕಟ್ಟಡವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ತಿಳಿಸಿದರು.

​ಸೋಮವಾರ ಹಮ್ಮಿಕೊಂಡಿದ್ದ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದ ಅವರು, "ಸಮಾಜದ ಹಿತದೃಷ್ಟಿಯಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ಕೆ ಈಗಾಗಲೇ ಹತ್ತು ಜನ ದಾನಿಗಳು ತಲಾ ಒಂದು ಕೊಠಡಿಯ ನಿರ್ಮಾಣಕ್ಕೆ ಧನಸಹಾಯ ನೀಡಲು ಮುಂದೆ ಬಂದಿದ್ದಾರೆ. ವಚನ ನೀಡಿದಂತೆ ಆಯಾ ಕೊಠಡಿಗಳಿಗೆ ದಾನಿಗಳ ಹೆಸರನ್ನೇ ಇಡಲಾಗುವುದು. ಶೀಘ್ರದಲ್ಲೇ ದಾನಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲಾಗುವುದು," ಎಂದು ಮಾಹಿತಿ ನೀಡಿದರು.

​ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅಡಿಗಲ್ಲು ನೆರವೇರಿಸಿದ ಕಂಬಳೇಶ್ವರದ ಶ್ರೀ ಸೋಮಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿ, "ಹುಟ್ಟು ಸಾವಿನ ನಡುವಿನ ಬದುಕಿನಲ್ಲಿ ಸಮಾಜಕ್ಕಾಗಿ ಉತ್ತಮ ಕಾರ್ಯ ಮಾಡುವುದು ಶ್ರೇಷ್ಠವಾದುದು. ಚಿತ್ತಾಪುರದಲ್ಲಿ ನಿರ್ಮಾಣವಾಗುತ್ತಿರುವ ಈ ಭವನ ಮತ್ತು ವಸತಿ ನಿಲಯಗಳು ಇಡೀ ಜಿಲ್ಲೆಗೆ ಮಾದರಿಯಾಗಲಿವೆ. ಸಮಾಜದ ಪ್ರತಿಯೊಬ್ಬರೂ ಈ ಕಾರ್ಯಕ್ಕೆ ಕೈಜೋಡಿಸಬೇಕು," ಎಂದು ಕರೆ ನೀಡಿದರು.

​ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ.ಪ್ರಭುರಾಜ ಕಾಂತಾ, ಅಣ್ಣಾರಾವ್ ಪಾಟೀಲ ಮುಡಬೂಳ, ಚಂದ್ರಶೇಖರ ಸಾತನೂರ, ಅಶೋಕ ನಿಪ್ಪಾಣಿ, ಮಲ್ಲಿಕಾರ್ಜುನರೆಡ್ಡಿ ಇಜಾರ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

​ಟ್ರಸ್ಟ್ ಕಾರ್ಯದರ್ಶಿ ನಾಗರಾಜ ಭಂಕಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಬರೀಷ್ ಸುಲೇಗಾಂವ ಕಾರ್ಯಕ್ರಮ ನಿರೂಪಿಸಿದರೆ, ಅನಿಲ್ ವಡ್ಡಡಗಿ ವಂದಿಸಿದರು. ಚಂದ್ರುಗೌಡ ಬೆಳಗುಂಪಾ, ಎಸ್.ಎನ್.ಪಾಟೀಲ, ಶಾಂತಕುಮಾರ್ ಹತ್ತಿ, ಕುಂಬಾರ ಸಮಾಜದ ಅಧ್ಯಕ್ಷ ವಿಶ್ವನಾಥ ಕುಂಬಾರ, ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

ಯಶಸ್ವಿ ಉಚಿತ ಆರೋಗ್ಯ ತಪಾಸಣಾ ಶಿಬಿರ.

ಚಿತ್ತಾಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿತ್ತಾಪುರ ಹಾಗೂ ಬಸವ ಜಯಂತಿ ಉತ್ಸವ ಆಚರಣೆ ಸಮಿತಿ ವತಿಯಿಂದ 893 ನೇ ಬಸವ ಜಯಂತಿ ಉತ್ಸವದ ಅಂಗವಾಗಿ ಸೋಮವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.

ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ಶಿಬಿರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಸವಣ್ಣನವರ ಜಯಂತಿಯ ಅಂಗವಾಗಿ ಇಂತಹ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಬಡವರು ಹಾಗೂ ಜನಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಮೆಡಿಕೇ‌ರ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಮುಖ್ಯಸ್ಥ ಡಾ.ಸುರೇಶ್ ಪಾಟೀಲ ಅವರ ಸಹಕಾರದೊಂದಿಗೆ ನಡೆದ ಈ ಶಿಬಿರದಲ್ಲಿ ಸುಮಾರು 15 ರಿಂದ 20 ನುರಿತ ವೈದ್ಯರ ತಂಡ ಭಾಗವಹಿಸಿತ್ತು. ಶಿಬಿರದಲ್ಲಿ ಲಭ್ಯವಿದ್ದ ಪ್ರಮುಖ ಸೇವೆಗಳು:

ಮೂಳೆ ತಜ್ಞರು, ಲ್ಯಾಪರೋಸ್ಕೋಪಿಕ್, ಜನರಲ್ ಮೆಡಿಸಿನ್ ಹಾಗೂ ಮಹಿಳಾ ತಜ್ಞರು. ಕೀಲು ನೋವು, ಮಕ್ಕಳ ತಜ್ಞರು, ಕಿವಿ ಪರೀಕ್ಷೆ ಹಾಗೂ ಚರ್ಮ ರೋಗ ತಪಾಸಣೆ. ಮಧುಮೇಹ (Sugar), ರಕ್ತದ ಒತ್ತಡ (BP), ಕಣ್ಣಿನ ಪರೀಕ್ಷೆ ಹಾಗೂ ಸೀಳು ತುಟಿಗಳ ತಪಾಸಣೆ. ವೈದ್ಯರ ತಂಡವು ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದರ ಜೊತೆಗೆ ಉಚಿತವಾಗಿ ಔಷಧಿಗಳನ್ನು ವಿತರಿಸುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಿತು.

ಬಸವ ಜಯಂತಿ ಸಮಿತಿ ವತಿಯಿಂದ ಶಿಬಿರಕ್ಕೆ ಬಂದ ಸಾರ್ವಜನಿಕರಿಗೆ ತಂಪಾದ ಕುಡಿಯುವ ನೀರು ಹಾಗೂ ಪ್ರಸಾದದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ನೂರಾರು ಜನರು ಶಿಬಿರದ ಲಾಭ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಜಯಂತಿ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಬೆಳಗುಂಪಾ, ಡಾ.ಸುರೇಶ್ ಪಾಟೀಲ, ಡಾ.ಸಂತೋಷ ಪಾಟೀಲ ಹೆಬ್ಬಾಳ, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಗೌರವಾಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ, ಅಧ್ಯಕ್ಷ ನಾಗರಾಜ ಭಂಕಲಗಿ ಉಪಸ್ಥಿತರಿದ್ದರು.

ಪ್ರಮುಖರಾದ ಸೋಮಶೇಖರ ಪಾಟೀಲ ಬೆಳಗುಂಪಾ, ನಾಗರೆಡ್ಡಿ ಪಾಟೀಲ ಕರದಾಳ, ರಮೇಶ್ ಮರಗೋಳ, ಶಿವಾನಂದ ಪಾಟೀಲ, ವೀರಣ್ಣಗೌಡ ಪರಸರೆಡ್ಡಿ, ಭೀಮಣ್ಣ ಸಾಲಿ, ಮಲ್ಲಿಕಾರ್ಜುನ ಕಾಳಗಿ, ಕುಂಬಾರ ಸಮಾಜದ ಅಧ್ಯಕ್ಷ ವಿಶ್ವನಾಥ ಕುಂಬಾರ, ರಮೇಶ ಕಾಳನೂರ. ಸೇರಿದಂತೆ ಅನೇಕ ಮುಖಂಡರು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಭಾಗವಹಿಸಿದ್ದರು.

ಬಸವ ಜಯಂತಿ ಸಂಭ್ರಮ: 70 ಜೋಡಿ ಎತ್ತುಗಳೊಂದಿಗೆ ಅದ್ದೂರಿ ಮೆರವಣಿಗೆ.

​ಚಿತ್ತಾಪುರ: ತಾಲೂಕು ಆಡಳಿತ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಬಸವ ಜಯಂತಿ ಉತ್ಸವ ಆಚರಣೆ ಸಮಿತಿ ಸಹಯೋಗದಲ್ಲಿ ಜಗಜ್ಯೋತಿ ಬಸವೇಶ್ವರರ 893ನೇ ಜಯಂತ್ಯುತ್ಸವವನ್ನು ಸೋಮವಾರ ಪಟ್ಟಣದಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.

ಪಟ್ಟಣದ ಪ್ರಜಾ ಸೌಧದಲ್ಲಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ವಿಶೇಷ ಪೂಜೆ ನೆರವೇರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಸವಣ್ಣನವರ ತತ್ವಗಳು ಇಂದಿಗೂ ಸಾರ್ವಕಾಲಿಕವಾಗಿದ್ದು, ಸಮಾಜದಲ್ಲಿ ಸಮಾನತೆ ತರುವಲ್ಲಿ ಅವರ ಕೊಡುಗೆ ಅಪಾರ ಎಂದರು.

ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಾಗಿತು. ಬಸವೇಶ್ವರರ ಭಾವಚಿತ್ರದೊಂದಿಗೆ ಸುಮಾರು 70 ಜೋಡಿ ಅಲಂಕೃತ ಎತ್ತುಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಮೆರವಣಿಗೆಯುದ್ದಕ್ಕೂ ಬಸವಣ್ಣನವರ ಪರ ಜೈಘೋಷಗಳು ಮೊಳಗಿದವು. ಮೆರವಣಿಗೆಯು ಬಸವೇಶ್ವರ ವೃತ್ತಕ್ಕೆ ತಲುಪಿದ ನಂತರ ಸಮಾಪ್ತಿಗೊಂಡಿತು. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನೂ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಗ್ರೇಡ್-2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ತಾಪಂ ಇಒ ಮಹ್ಮದ್ ಅಕ್ರಂ ಪಾಷಾ, ಸಿಪಿಐ ಎಸ್.ಸಿ.ಪಾಟೀಲ, ಪಿಎಸ್‌ಐ ಮಂಜುನಾಥ ರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಕೃಷಿ ಅಧಿಕಾರಿ ಸಂಜೀವಕುಮಾರ ಮಾನಕರೆ ಹಾಗೂ ಪಶು ವೈದ್ಯಾಧಿಕಾರಿ ಡಾ. ಶಂಕರ ಕಣ್ಣಿ ಉಪಸ್ಥಿತರಿದ್ದರು.
​ಜಯಂತಿ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಬೆಳಗುಂಪಾ, ಮಹಾಸಭಾ ತಾಲೂಕು ಗೌರವಾಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ, ಅಧ್ಯಕ್ಷ ನಾಗರಾಜ ಭಂಕಲಗಿ ಸೇರಿದಂತೆ ಮುಖಂಡರಾದ ಸೋಮಶೇಖರ ಪಾಟೀಲ ಬೆಳಗುಂಪಾ, ನಾಗರೆಡ್ಡಿ ಪಾಟೀಲ ಕರದಾಳ, ರಮೇಶ್ ಮರಗೋಳ, ಶಿವಾನಂದ ಪಾಟೀಲ, ಜಗಣ್ಣಗೌಡ ರಾಮತೀರ್ಥ, ವೀರಣ್ಣಗೌಡ ಪರಸರೆಡ್ಡಿ, ಭೀಮಣ್ಣ ಸಾಲಿ, ರವೀಂದ್ರ ಸಜ್ಜನಶೆಟ್ಟಿ, ಮಲ್ಲಿಕಾರ್ಜುನ ಕಾಳಗಿ, ಅಣ್ಣಾರಾವ ಪಾಟೀಲ ಮುಡಬೂಳ, ಕುಂಬಾರ ಸಮಾಜದ ಅಧ್ಯಕ್ಷ, ವಿಶ್ವನಾಥ ಕುಂಬಾರ ಹಾಗೂ ಸಾವಿರಾರು ಭಕ್ತಾದಿಗಳು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಶುಕ್ರವಾರ, ಏಪ್ರಿಲ್ 17, 2026

ಕುಂಬಾರ ಮಹಾಸಭಾದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಅದ್ಧೂರಿ ಸನ್ಮಾನ.

ಚಿತ್ತಾಪುರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಅಖಿಲ ಭಾರತ ಕುಂಬಾರ ಮಹಾಸಭಾದ ತಾಲ್ಲೂಕು ಘಟಕದ ಸಭೆಯಲ್ಲಿ, ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಹಾಗೂ ವಿವಿಧ ಪದಾಧಿಕಾರಿಗಳಿಗೆ ಕುಂಬಾರ ಸಮಾಜದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.​ಅಖಿಲ ಭಾರತ ಕುಂಬಾರ ಮಹಾಸಭಾದ ತಾಲೂಕು ಅಧ್ಯಕ್ಷರಾಗಿ ನೇಮಕಗೊಂಡ ವಿಶ್ವನಾಥ ಎಸ್. ಕುಂಬಾರ ಅವರಿಗೆ ಸಮಾಜದ ಮುಖಂಡರು ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ ಶುಭ ಹಾರೈಸಿದರು.
​ಅಧ್ಯಕ್ಷರ ಜೊತೆಗೆ ಸಂಘದ ವಿವಿಧ ಜವಾಬ್ದಾರಿಗಳಿಗೆ ಆಯ್ಕೆಯಾದ ಈ ಕೆಳಗಿನ ಪ್ರಮುಖರನ್ನು ಸಹ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು ​ಗೌರವ ಅಧ್ಯಕ್ಷರಾಗಿ ಮಹಾದೇವ ಕುಂಬಾರ ಅಲ್ಲೂರ, ಮೋಗಲಪ್ಪ ಕುಂಬಾರ ಚಿತ್ತಾಪುರ, ಮಹಾದೇವ ಕುಂಬಾರ.​ಉಪಾಧ್ಯಕ್ಷರಾಗಿ ಆನಂದ ಕುಂಬಾರ ಚಿತ್ತಾಪುರ.​ಸಹ ಕಾರ್ಯದರ್ಶಿ ಬಸವರಾಜ ಕುಂಬಾರ. ನೇಮಕಗೊಂಡಿದ್ದಾರೆ.

​ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ವಿಶ್ವನಾಥ ಕುಂಬಾರ ಅವರು, ಸಮಾಜ ಬಾಂಧವರು ತನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು, ತಾಲ್ಲೂಕಿನಲ್ಲಿ ಕುಂಬಾರ ಸಮಾಜದ ಏಳಿಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.

​ಅಖಿಲ ಭಾರತ ಕುಂಬಾರ ಮಹಾಸಭಾ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಜಗದೇವ ಕುಂಬಾರ ಮಾತನಾಡಿ, ಸಂಘಟನೆಯ ಶಕ್ತಿ ಒಗ್ಗಟ್ಟಿನಲ್ಲಿದೆ. ಪದಾಧಿಕಾರಿಗಳು ಸಮಾಜದ ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.

​ಈ ಸಮಾರಂಭದಲ್ಲಿ ಶ್ರೀಮಂತ ಕುಂಬಾರ, ಮಹಾದೇವ ಕುಂಬಾರ, ಬಸವರಾಜ ಕುಂಬಾರ, ಶರಣಪ್ಪ ಕುಂಬಾರ ಕರದಾಳ, ಶರಣಪ್ಪ ಕುಂಬಾರ, ಸಂಗಮೇಶ ಕುಂಬಾರ, ಆನಂದ ಮುಡಬೂಳಕರ್ ಕುಂಬಾರ, ರಾಜು ಕುಂಬಾರ, ಅಂಬರೀಶ್ ಕುಂಬಾರ, ರವಿ ಕುಂಬಾರ, ಮಲ್ಲಿಕಾರ್ಜುನ ಕುಂಬಾರ ಅಲ್ಲೂರ, ಮಲ್ಲಿಕಾರ್ಜುನ ಕುಂಬಾರ, ಸಿದ್ದಣ್ಣ ಕುಂಬಾರ, ಸುಭಾಷ ಕುಂಬಾರ, ಜಗದೀಶ್ ಕುಂಬಾರ, ಬಂಡೆಪ್ಪ ಕುಂಬಾರ, ಶರಣಪ್ಪ ಕುಂಬಾರ, ಶರಣಪ್ಪ ಎನ್. ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ದಶರಥ್ ಕುಂಬಾರ, ಕಾಶಿನಾಥ್ ಕುಂಬಾರ ಬೆಣ್ಣೂರ, ಗುರುರಾಜ್ ಕುಂಬಾರ ಸೇರಿದಂತೆ ಸಮಾಜದ ನೂರಾರು ಕುಲಬಾಂಧವರು ಪಾಲ್ಗೊಂಡಿದ್ದರು.

ಕುಂಬಾರರ ಮಹಾಸಭಾದ ಅಧ್ಯಕ್ಷರಾಗಿ ವಿಶ್ವನಾಥ್ ಕುಂಬಾರ ನೇಮಕ

ಚಿತ್ತಾಪುರ: ಅಖಿಲ ಭಾರತ ಕುಂಬಾರರ ಮಹಾಸಭಾದ ಕರ್ನಾಟಕ ರಾಜ್ಯ ಘಟಕದ ವತಿಯಿಂದ ಚಿತ್ತಾಪುರ ತಾಲ್ಲೂಕು ಘಟಕಕ್ಕೆ ನೂತನ ಅಧ್ಯಕ್ಷರನ್ನಾಗಿ ಸಮಾಜ ಸೇವಕ ವಿಶ್ವನಾಥ್ ಎಸ್. ಕುಂಬಾರ ಅವರನ್ನು ನೇಮಕ ಮಾಡಲಾಗಿದೆ.

ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವಿಶ್ವನಾಥ್ ಅವರ ಬದ್ಧತೆ ಮತ್ತು ಕಾರ್ಯವೈಖರಿಯನ್ನು ಪರಿಗಣಿಸಿ, ಮಹಾಸಭಾದ ರಾಜ್ಯ ಅಧ್ಯಕ್ಷರಾದ ನಿತ್ಯಾಭರಣ ಚೌಡಶೆಟ್ಟಿ ಅವರು ಈ ನೇಮಕಾತಿ ಆದೇಶ ಹೊರಡಿಸಿದ್ದಾರೆ. ಸಂಘಟನೆಯ ನಿಯಮಾವಳಿಗಳಿಗೆ ಬದ್ಧರಾಗಿ, ಶಿಸ್ತಿನಿಂದ ಸಮಾಜದ ಹಿತರಕ್ಷಣೆಗಾಗಿ ಕೆಲಸ ಮಾಡುವಂತೆ ಅವರಿಗೆ ಸೂಚಿಸಲಾಗಿದೆ.

ನೂತನ ಅಧ್ಯಕ್ಷರಿಗೆ ಸಂಘಟನೆಯು ಈ ಕೆಳಗಿನ ಪ್ರಮುಖ ಹೊಣೆಗಾರಿಕೆಗಳನ್ನು ನೀಡಿದೆ ತಾಲ್ಲೂಕು ಮಟ್ಟದಲ್ಲಿ ಕುಂಬಾರ ಸಮಾಜದ ಚಟುವಟಿಕೆಗಳನ್ನು ಮುನ್ನಡೆಸುವುದು. ಸಮಾಜದ ಯುವಶಕ್ತಿ ಹಾಗೂ ಹಿಂದುಳಿದ ವರ್ಗಗಳ ಏಳಿಗೆಗಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವುದು. ತಾಲ್ಲೂಕು ವ್ಯಾಪ್ತಿಯಲ್ಲಿ ಅರ್ಹ ಮತ್ತು ಸಂಘಟನೆಗೆ ಬದ್ಧರಾಗಿರುವ ಸದಸ್ಯರನ್ನು ಆಯ್ಕೆ ಮಾಡಿ ಬಲಿಷ್ಠ ಸಮಿತಿಯನ್ನು ರಚಿಸುವುದು. ರಾಜ್ಯ ಮತ್ತು ರಾಷ್ಟ್ರೀಯ ನಾಯಕತ್ವದ ಮಾರ್ಗದರ್ಶನದಲ್ಲಿ ಸಂಘಟನೆಯನ್ನು ಸಂಘಟಿಸುವುದು.

"ವಿಶ್ವನಾಥ್ ಅವರ ನೇಮಕವು ತಾಲ್ಲೂಕಿನಲ್ಲಿ ಸಮಾಜದ ಸಂಘಟನೆಗೆ ಹೆಚ್ಚಿನ ಶಕ್ತಿ ನೀಡಲಿದೆ. ಅವರ ನೇತೃತ್ವದಲ್ಲಿ ಸಮಾಜದ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯಲಿ," ಎಂದು ಸಮಾಜದ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಶ್ವನಾಥ್ ಎಸ್. ಕುಂಬಾರ ಅವರ ನೇಮಕಾತಿಗೆ ಸಮಾಜದ ವಿವಿಧ ಮುಖಂಡರು, ಯುವ ಮುಖಂಡರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದು, ಅವರ ಮುಂದಿನ ಸಮಾಜಮುಖಿ ಕಾರ್ಯಗಳಿಗೆ ಶುಭ ಹಾರೈಸಿದ್ದಾರೆ.

ಗುರುವಾರ, ಏಪ್ರಿಲ್ 16, 2026

ಶ್ರೀಮತಿ ಮಹಾದೇವಮ್ಮ ಬಿ. ಪಾಟೀಲ್ ಸ್ಮಾರಕ ಸಿ.ಬಿ.ಎಸ್.ಇ ಶಾಲೆಗೆ ಶೇ. 99 ರಷ್ಟು ಫಲಿತಾಂಶ: ಶೈಕ್ಷಣಿಕ ಕ್ಷೇತ್ರದಲ್ಲಿ ಮೈಲಿಗಲ್ಲು

ಚಿತ್ತಾಪುರ: ಪಟ್ಟಣದ ವಿಶ್ವರು ಶಿಕ್ಷಣ ಹಾಗೂ ಕಲ್ಯಾಣ ಸಂಸ್ಥೆಯ ಶ್ರೀಮತಿ ಮಹಾದೇವಮ್ಮ ಬಿ. ಪಾಟೀಲ್ ಸ್ಮಾರಕ ಸಿ.ಬಿ.ಎಸ್.ಇ ಶಾಲೆಯು 2025-26ನೇ ಸಾಲಿನ ಸಿ.ಬಿ.ಎಸ್.ಇ 10ನೇ ತರಗತಿಯ ಪರೀಕ್ಷೆಯಲ್ಲಿ ಶೇ. 99 ರಷ್ಟು ಅತ್ಯುತ್ತಮ ಫಲಿತಾಂಶ ದಾಖಲಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಶಾಲೆಯ ವಿದ್ಯಾರ್ಥಿಗಳು ವೈಯಕ್ತಿಕ ಸಾಧನೆಯಲ್ಲೂ ಗಮನ ಸೆಳೆದಿದ್ದು, ಅಗ್ರಸ್ಥಾನ ಪಡೆದವರ ವಿವರ ಈ ಕೆಳಗಿನಂತಿದೆ ಪ್ರಥಮ ಸ್ಥಾನ: ಪ್ರೇಮ್ ತಂದೆ ಕಪಿಲ್ ಜಿತುರೆ (ಶೇ. 94.40) ದ್ವಿತೀಯ ಸ್ಥಾನ: ಚೇತನ್ ತಂದೆ ಬಸವರಾಜ (ಶೇ. 93)

ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 56 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದು, ಶಾಲೆಯು ಶೇ. 100 ರಷ್ಟು ತೇರ್ಗಡೆ ಪ್ರಮಾಣವನ್ನು ಕಾಯ್ದುಕೊಂಡಿದೆ. ವರ್ಗೀಕೃತ ಫಲಿತಾಂಶ ಇಂತಿದೆ, ಅತ್ಯುನ್ನತ ಶ್ರೇಣಿ (Distinction): 18 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ (First Class): 19 ವಿದ್ಯಾರ್ಥಿಗಳು,ದ್ವಿತೀಯ ಶ್ರೇಣಿ (Second Class): 16 ವಿದ್ಯಾರ್ಥಿಗಳು,ತೃತೀಯ ಶ್ರೇಣಿ (Pass Class): 02 ವಿದ್ಯಾರ್ಥಿಗಳು.

ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿರುವ ಅವರು, ವಿದ್ಯಾರ್ಥಿಗಳ ಮುಂದಿನ ಉನ್ನತ ಶಿಕ್ಷಣ ಹಾಗೂ ಭವಿಷ್ಯದ ಹಾದಿಗೆ ಶುಭ ಹಾರೈಸಿದ್ದಾರೆ.

ಗುರು ಇಂಡೇನ್ ಗ್ಯಾಸ್ ಏಜೆನ್ಸಿ ಅವ್ಯವಸ್ಥೆ; ಗ್ರಾಹಕರ ಆಕ್ರೋಶ.

ಚಿತ್ತಾಪುರ: ಪಟ್ಟಣದ ಗುರು ಇಂಡೇನ್ ಗ್ಯಾಸ್ ಏಜೆನ್ಸಿಯ ಕಳಪೆ ಸೇವೆ ಹಾಗೂ ಸಿಬ್ಬಂದಿಗಳ ಬೇಜವಾಬ್ದಾರಿತನದ ವಿರುದ್ಧ ಗ್ರಾಹಕರು ಬುಧವಾರ ತೀವ್ರ ಆಕ್ರೋಶ ವ್ಯ...