ಶುಕ್ರವಾರ, ಮಾರ್ಚ್ 20, 2026

ವರುಣನಗರದಲ್ಲಿ ಶರಣರ ಸಂಭ್ರಮ: ಏಪ್ರಿಲ್ 7ಕ್ಕೆ ಶ್ರೀ ಶರಣಬಸವೇಶ್ವರ ಭವ್ಯ ರಥೋತ್ಸವ.

ಚಿತ್ತಾಪುರ: ಇಲ್ಲಿನ ವರುಣನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜಾತ್ರಾ ಮಹೋತ್ಸವದ ಕಳೆಗಟ್ಟಿದ್ದು, ರಥ ಪೂಜೆ ಹಾಗೂ ನೂತನ ದೀಪಸ್ತಂಭ ಉದ್ಘಾಟನೆಯೊಂದಿಗೆ ಪೂರ್ವಭಾವಿ ಸಭೆ ಅತ್ಯಂತ ಭಕ್ತಿಪೂರ್ವಕವಾಗಿ ಜರುಗಿತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಶ್ರೀ ಶರಣಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಸೇವಾ ಟ್ರಸ್ಟ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

​ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಅಂಬರೀಶ್ ಸುಲೆಗಾಂವ್, "ಕಲಬುರ್ಗಿಯ ಶರಣಬಸವೇಶ್ವರ ಜಾತ್ರೆಯಷ್ಟೇ ಪವಿತ್ರವಾದ ಇತಿಹಾಸ ನಮ್ಮ ವರುಣನಗರದ ಜಾತ್ರೆಗೂ ಇದೆ. ಹಿಂದೆ ಅನೇಕ ಅಡೆತಡೆಗಳ ನಡುವೆಯೂ ಈ ಪರಂಪರೆಯನ್ನು ಉಳಿಸಿಕೊಂಡು ಬರಲಾಗಿದೆ. ಇಂದು ಶರಣರ ಕೃಪೆ ಹಾಗೂ ಭಕ್ತರ ಮತ್ತು ದಾನಿಗಳ ಉದಾರ ಮನಸ್ಸಿನಿಂದ ಕಳೆದ ಕೆಲವು ವರ್ಷಗಳಿಂದ ಈ ಜಾತ್ರೆಯು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿರುವುದು ಸಂತಸದ ವಿಷಯ," ಎಂದರು.

​ಜಾತ್ರಾ ಮಹೋತ್ಸವದ ಅಂಗವಾಗಿ ಈ ಕೆಳಗಿನ ವಿಶೇಷ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ:
​ವಿಶ್ವವಂದ್ಯರ ಪುರಾಣ: ಮಾರ್ಚ್ 26 ರಿಂದ ಏಪ್ರಿಲ್ 6ರ ವರೆಗೆ ಪ್ರತಿದಿನ ಸಂಜೆ 7:30ಕ್ಕೆ ಅಬ್ಬೆ ತುಮಕೂರ ಸದ್ಗುರು ಶ್ರೀ ವಿಶ್ವಾರಾಧ್ಯರ ಪುರಾಣ ಪ್ರವಚನ ನಡೆಯಲಿದೆ.
​ನಾಣ್ಯಗಳ ತುಲಾಭಾರ: ಷ.ಬ್ರ ಶ್ರೀ ಶಿವಶಂಕರ ಶಿವಾಚಾರ್ಯರ ಪಟ್ಟಾಧಿಕಾರದ ಸುವರ್ಣ ಮಹೋತ್ಸವದ ನಿಮಿತ್ತ ಅವರಿಗೆ ನಾಣ್ಯಗಳ ಮೂಲಕ ಭಕ್ತಿಪೂರ್ವಕ ತುಲಾಭಾರ ನೆರವೇರಲಿದೆ.
​ಮಹಾ ರಥೋತ್ಸವ: ಏಪ್ರಿಲ್ 7 ರಂದು ಸಾಯಂಕಾಲ 6:30ಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಶರಣಬಸವೇಶ್ವರರ ಭವ್ಯ ರಥೋತ್ಸವ ಜರುಗಲಿದೆ.
ದೀಪಸ್ತಂಭ ಉದ್ಘಾಟಿಸಿ ಆಶೀರ್ವಚನ ನೀಡಿದ ಪೂಜ್ಯ ಶ್ರೀ ಕಂಬಳೇಶ್ವರ ಮಠದ ಶ್ರೀಗಳಗಾದ ಸೋಮಶೇಖರ ಶಿವಾಚಾರ್ಯರು, "ವರುಣನಗರದಲ್ಲಿ ಶರಣಬಸವೇಶ್ವರ ದೇವಸ್ಥಾನವು ಇಂದು ಈ ಮಟ್ಟಕ್ಕೆ ಅಭಿವೃದ್ಧಿ ಹೊಂದಲು ಯುವ ಪೀಳಿಗೆಯ ಶ್ರಮವೇ ಕಾರಣ. ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಒಂದಾಗಿ ನಡೆಸುತ್ತಿರುವ ಈ ಧಾರ್ಮಿಕ ಕಾರ್ಯಗಳು ಸಮಾಜಕ್ಕೆ ಮಾದರಿ," ಎಂದು ಹಾರೈಸಿದರು.

​ಸಭೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ನಾಗರಾಜ ಭಂಕಲಗಿ, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವಿಜಯಕುಮಾರ್ ದೇಶಮುಖ್, 2026ನೇ ಸಾಲಿನ ಜಾತ್ರಾ ಮಹೋತ್ಸವ ಅಧ್ಯಕ್ಷ ಅಶೋಕ್ ನಿಪ್ಪಾಣಿ ಸೇರಿದಂತೆ ಪ್ರಮುಖರಾದ ಆನಂದ ಪಾಟೀಲ ನರಬೂಳಿ, ಶ್ರೀಮತಿ ರಾಜೇಶ್ವರಿ ಪಾಟೀಲ್, ಶ್ರೀಮತಿ ಗಿರೀಜಾ ಪಾಟೀಲ್ ಹೆಬ್ಬಾಳ, ಶ್ರೀಮತಿ ಪ್ರಭಾ ಬೆಂಗಳೂರು, ಅನಿಲ್ ವಡ್ಡಡಗಿ, ಮಲರೆಡ್ಡಿ ಗೋಪಸೇನ್, ಜಗಣ್ಣಗೌಡ ಪಾಟೀಲ್, ಕೋಟೇಶ್ವರ ರೇಷ್ಮಿ ಹಾಗೂ ಪ್ರಸಾದ ಅವಂಟಿ, ಶ್ರಿಮಂತ ಕುಂಬಾರ, ಸೇರಿದಂತೆ ಇತರರು ಉಪಸ್ಥಿತರಿದ್ದರು.​ಕಾರ್ಯಕ್ರಮವನ್ನು ಬಸವರಾಜ ಹೋಟಿ ಅಚ್ಚುಕಟ್ಟಾಗಿ ನಿರೂಪಿಸಿದರೆ, ವಿಶ್ವಾರಾಧ್ಯ ಪಾಟೀಲ್ ವಂದನಾರ್ಪಣೆ ಮಾಡಿದರು.

ಮೀಸಲಾತಿ ವರದಿ ಕೈಬಿಡಲು ಮರೆಪ್ಪ ಹಳ್ಳಿ ಒತ್ತಾಯ.

ಚಿತ್ತಾಪುರ: ಒಳಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ನಾಗಮೋಹನ್ ದಾಸ್ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ರಾಜ್ಯ ಸರ್ಕಾರ ಕೂಡಲೇ ಈ ವರದಿಯನ್ನು ತಿರಸ್ಕರಿ ಮೀಸಲಾತಿ ವರದಿ ಕೈಬಿಡಬೇಕು ಎಂದು ಆಗ್ರಹಿಸಿ ಮಾರ್ಚ್ 25ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ಮರೆಪ್ಪ ಹಳ್ಳಿ ತಿಳಿಸಿದರು.

​ಪಟ್ಟಣದ ಬುದ್ಧ ವಿಹಾರದಲ್ಲಿ 'ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟ'ದ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ​ಒಳಮೀಸಲಾತಿ ಕುರಿತಂತೆ ನಾಗಮೋಹನ್ ದಾಸ್ ಆಯೋಗ ನೀಡಿರುವ ವರದಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು "ಈ ವರದಿಯು ಯಾವುದೇ ನಿಖರವಾದ ಹಾಗೂ ವೈಜ್ಞಾನಿಕ ಸಮೀಕ್ಷೆಯ ಆಧಾರದ ಮೇಲೆ ಸಿದ್ಧವಾಗಿಲ್ಲ. ಪರಿಶಿಷ್ಟ ಜಾತಿಯಲ್ಲಿರುವ ಸಮಗ್ರ ಉಪಜಾತಿಗಳ ನಿಖರ ಜನಸಂಖ್ಯೆ, ಅವರ ಪ್ರಸ್ತುತ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಸರಿಯಾಗಿ ಅಧ್ಯಯನ ಮಾಡದೆ, ಕೇವಲ ಮೇಲ್ನೋಟದ ಅಂಕಿ-ಅಂಶಗಳ ಆಧಾರದ ಮೇಲೆ ವರದಿ ನೀಡಲಾಗಿದೆ. ಇದರಿಂದ ಬಲಗೈ ಸಮುದಾಯಗಳಿಗೆ ಹಾಗೂ ಅತ್ಯಂತ ಹಿಂದುಳಿದ ಅಲೆಮಾರಿ ಉಪಜಾತಿಗಳಿಗೆ ತೀವ್ರ ಅನ್ಯಾಯವಾಗಲಿದೆ. ಸಮುದಾಯಗಳ ನಡುವೆ ಕಂದಕ ಸೃಷ್ಟಿಸುವ ಇಂತಹ ದೋಷಪೂರಿತ ಹಾಗೂ ಅವೈಜ್ಞಾನಿಕ ವರದಿಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಬಾರದು" ಎಂದು ವಿಸ್ತೃತವಾಗಿ ವಿವರಿಸಿದರು.

ಸರ್ಕಾರದ ಕಣ್ಣು ತೆರೆಸುವ ನಿಟ್ಟಿನಲ್ಲಿ ಹಾಗೂ ಈ ಅವೈಜ್ಞಾನಿಕ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸುವಂತೆ ಒತ್ತಾಯಿಸಿ, 'ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟ'ದ ನೇತೃತ್ವದಲ್ಲಿ ದಿನಾಂಕ: 25-03-2026 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಲಾಗಿದೆ.

"ನಮ್ಮ ಸಮುದಾಯದ ಅಳಿವು-ಉಳಿವಿನ ಪ್ರಶ್ನೆಯಾಗಿರುವ ಈ ಹೋರಾಟಕ್ಕೆ ಪ್ರತಿಯೊಬ್ಬರ ಬೆಂಬಲ ಅಗತ್ಯವಿದೆ. ಚಿತ್ತಾಪುರ ತಾಲೂಕು ಸೇರಿದಂತೆ ಜಿಲ್ಲೆಯ ಮೂಲೆ-ಮೂಲೆಗಳಿಂದ ಸಮುದಾಯದ ಮುಖಂಡರು, ಯುವಕರು, ಮಹಿಳೆಯರು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಹೋರಾಟವನ್ನು ಯಶಸ್ವಿಗೊಳಿಸಬೇಕು" ಎಂದು ಕಳಕಳಿಯ ಮನವಿ ಮಾಡಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಸುನಿಲ್ ದೊಡ್ಡಮನಿ, ಶಿವರುದ್ರ ಬೇಣಿ, ಮಲ್ಲಪ್ಪ ಹೂಸಮನಿ, ಮಲ್ಲಿಕಾರ್ಜುನ ಬೆಣ್ಣೂರಕರ್, ಸುರೇಶ್ ಮೆಂಗನ್, ಸಾಯಬಣ ಬನಹಟಿ, ಶರಣಬಸು ಶಿರೂಳಕರ್, ದೇವಿಂದ್ರ ಕುಮಸಿ, ಹರಳಯ್ಯ ಬಡಿಗೇರ್, ಶಿವಮೂರ್ತಿ ಪಾಮನೂರ, ಸೂರ್ಯಕಾಂತ ರದ್ದೇವಾಡಿ, ಶರಣು ನಾಟೀಕಾರ್, ನಾಗೆಂದ್ರ ಬುರ್ಲಿ, ಮಲ್ಲಿಕಾರ್ಜುನ ಮುಡಬೂಳಕರ್, ಜಗನ್ನಾಥ ಮುಡಬೂಳಕರ್, ಸೇರಿದಂತೆ ಇತರರು ಇದ್ದರು.

ಬುಧವಾರ, ಮಾರ್ಚ್ 18, 2026

ಭಾರೀ ಮಳೆ, ಗುಡುಗು-ಮಿಂಚಿನ ಆರ್ಭಟ: ಜನಜೀವನ ಅಸ್ತವ್ಯಸ್ತ, ಓರಿಯಂಟ್ ಸಿಮೆಂಟ್ ಕಾರ್ಖಾನೆಗೆ ಹಾನಿ.

​ಚಿತ್ರಾಪುರ: ಪಟ್ಟಣ ಸೇರಿ ನಿನ್ನೆ ರಾತ್ರಿ  ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ, ಗುಡುಗು ಮತ್ತು ಮಿಂಚು ಸಹಿತ ವರುಣನ ಆರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹವಾಮಾನದಲ್ಲಿನ ಈ ದಿಢೀರ್ ಮತ್ತು ತೀವ್ರ ಬದಲಾವಣೆಯಿಂದಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾನಿಯಾಗಿದ್ದು, ಸ್ಥಳೀಯ ಮೂಲಸೌಕರ್ಯ ಮತ್ತು ದೈನಂದಿನ ಚಟುವಟಿಕೆಗಳಿಗೆ ವ್ಯತ್ಯಯ ಉಂಟಾಗಿದೆ.

ಈ ಅಕಾಲಿಕ ಬಿರುಗಾಳಿ ಮತ್ತು ಮಳೆಯಿಂದಾಗಿ ಇಲ್ಲಿನ ಓರಿಯಂಟ್ ಸಿಮೆಂಟ್ ಕಾರ್ಖಾನೆಯ ಮೇಲೂ ಗಂಭೀರ ಪರಿಣಾಮ ಬೀರಿದೆ. ಕಾರ್ಖಾನೆಯ ಆವರಣದಲ್ಲಿರುವ ಕೆಲವು ಸಹಾಯಕ ಸೌಕರ್ಯಗಳಿಗೆ ಹಾನಿಯಾಗಿದ್ದು, ದೈನಂದಿನ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ. ನಿರಂತರ ಮಳೆಯಿಂದಾಗಿ ಕಾರ್ಖಾನೆ ಆವರಣದಲ್ಲಿ ನೀರು ನಿಂತು ಜಲಾವೃತಗೊಂಡಿದ್ದು, ಬಿರುಗಾಳಿಯ ಅಬ್ಬರಕ್ಕೆ ಕಾರ್ಯನಿರ್ವಹಣೆಯಲ್ಲಿ ಭಾರೀ ಸವಾಲುಗಳು ಎದುರಾಗಿವೆ.
ಬಿರುಗಾಳಿಯ ರಭಸಕ್ಕೆ ವಿದ್ಯುತ್ ಕಂಬಗಳು ಹಾನಿಗೀಡಾಗಿದ್ದು, ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ, ಕೃಷಿ ಜಮೀನುಗಳು ಮಳೆಗೆ ಸಿಲುಕಿ ಹಾನಿಗೊಳಗಾಗಿವೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

"ಅದೃಷ್ಟವಶಾತ್ ಈ ಪ್ರಕೃತಿ ವಿಕೋಪದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ. ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ಆದಷ್ಟು ಬೇಗ ಸಹಜ ಸ್ಥಿತಿಗೆ ತರಲು ಪುನರ್‌ಸ್ಥಾಪನಾ ಕಾರ್ಯಗಳು ಭರದಿಂದ ಸಾಗುತ್ತಿವೆ," ಎಂದು ಅದಾನಿ ಸಿಮೆಂಟ್‌ನ ಮುಖ್ಯ ಕಾರ್ಖಾನೆ ವ್ಯವಸ್ಥಾಪಕರಾದ ಅಜಯ್ ಶರ್ಮಾ ಅವರು ಮಾಹಿತಿ ನೀಡಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಸ್ವಂತ ಖರ್ಚಿನಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಿದ ಎಸ್‌ಡಿಎಂಸಿ ಅಧ್ಯಕ್ಷ

ಚಿತ್ತಾಪುರ: ಮಾರ್ಚ್,18 ಇಂದಿನಿಂದ ಎಸ್.ಎಸ್.ಎಲ್.ಸಿ (SSLC) ಪರೀಕ್ಷೆಗಳು ಆರಂಭವಾಗಿದ್ದು, ಪರೀಕ್ಷೆ ಬರೆಯಲು ಚಿತ್ತಾಪುರ ಕೇಂದ್ರಕ್ಕೆ ತೆರಳುವ ಭಾಗೋಡಿ ಗ್ರಾಮದ ಶಾಲಾ ವಿದ್ಯಾರ್ಥಿಗಳಿಗೆ, ಶಾಲೆಯ ಎಸ್.ಡಿ.ಎಂ.ಸಿ (SDMC) ಅಧ್ಯಕ್ಷರಾದ ದೇವಿಂದ್ರ ಡೋಣಗಾಂವ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಉಚಿತ ಹಾಗೂ ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಮಾದರಿಯಾಗಿದ್ದಾರೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕೆ ಸರಿಯಾಗಿ ತೆರಳಲು ಯಾವುದೇ ರೀತಿಯ ಸಾರಿಗೆ ತೊಂದರೆಯಾಗಬಾರದು ಮತ್ತು ಮಕ್ಕಳು ಸುರಕ್ಷಿತವಾಗಿ ಹೋಗಿ ಬರಬೇಕು ಎಂಬ ಸದುದ್ದೇಶದಿಂದ, ಖಾಸಗಿ ಕ್ರಷರ್ ವಾಹನದ ಅನುಕೂಲ ಮಾಡಿಕೊಟ್ಟಿದ್ದಾರೆ. ಇವರ ಈ ವಿದ್ಯಾರ್ಥಿಪರ ಕಾರ್ಯಕ್ಕೆ ಗ್ರಾಮಸ್ಥರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಗಣ್ಯರ ಶುಭ ಹಾರೈಕೆ:
ಪರೀಕ್ಷೆಗೆ ತೆರಳುವ ಮುನ್ನ ವಿದ್ಯಾರ್ಥಿಗಳನ್ನು ಹುರಿದುಂಬಿಸಲು ಊರಿನ ಗಣ್ಯರು ಉಪಸ್ಥಿತರಿದ್ದರು. ರಾಯಚೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಡಾ. ಮಹಾಂತಗೌಡ ಪಾಟೀಲ್ ಹಾಗೂ ಚಿತ್ತಾಪುರ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶರಣಗೌಡ ಪಾಟೀಲ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಶುಭಕೋರಿದರು.

ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ರಾಜೇಂದ್ರಪ್ಪ ಆರಣಕಲ್, ಶರಣಬಸಪ್ಪ ಬೆಂಕಿ, ದೇವಿಂದ್ರ ನಾಟಿಕಾರ್, ರಮೇಶ್ ನೀಲಕಂಠ, ಮಲ್ಲಿಕಾರ್ಜುನ್ ಏರಿ, ಮಹಾಂತಪ್ಪ ಹಾಸಬಾ ಸೇರಿದಂತೆ ಹಲವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಎದುರಿಸಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಲಿ ಎಂದು ಹಾರೈಸಿದರು.

ಭಾನುವಾರ, ಮಾರ್ಚ್ 15, 2026

ಬಿಸಿಲ ನಾಡಿನ 'ಮಲೆನಾಡು' ಚಿಂಚೋಳಿ ಅಭಯಾರಣ್ಯಕ್ಕೆ ಹೈಟೆಕ್ ಸ್ಪರ್ಶ: ಪ್ರವಾಸೋದ್ಯಮಕ್ಕೆ ಹೊಸ ಕಳೆ!

ಕಲಬುರಗಿ: ಕಲ್ಯಾಣ ಕರ್ನಾಟಕದ ಹೆಮ್ಮೆಯ ನೈಸರ್ಗಿಕ ತಾಣ, ಬಿಸಿಲ ನಾಡಿನ ಮಲೆನಾಡು ಎಂದೇ ಖ್ಯಾತಿಯಾಗಿರುವ ಚಿಂಚೋಳಿ ವನ್ಯಜೀವಿ ಅಭಯಾರಣ್ಯದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಪರಿಸರ ಪ್ರವಾಸೋದ್ಯಮವನ್ನು ಬಲಪಡಿಸುವ ಮೂಲಕ ಸ್ಥಳೀಯ ಆರ್ಥಿಕತೆಗೆ ಚೈತನ್ಯ ನೀಡುವ ನಿಟ್ಟಿನಲ್ಲಿ ಸರ್ಕಾರವು ಕೆಕೆಆರ್ ಡಿಬಿ (KKRDB) ಅನುದಾನದಲ್ಲಿ ಬೃಹತ್ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಚಿತ್ತಾಪೂರ ಕ್ಷೇತ್ರದ ಶಾಸಕರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

​ನಿಸರ್ಗ ಪ್ರಿಯರಿಗೆ ಹಬ್ಬದೂಟ: ಹೊಸ ಸೌಲಭ್ಯಗಳು
​ಚಿಂಚೋಳಿ ಅಭಯಾರಣ್ಯದ ನೈಸರ್ಗಿಕ ಸೊಬಗನ್ನು ಸವಿಯಲು ಪ್ರವಾಸಿಗರಿಗೆ ಅನುಕೂಲವಾಗುವಂತೆ ಈ ಕೆಳಗಿನ ಸೌಲಭ್ಯಗಳನ್ನು ಲೋಕಾರ್ಪಣೆ ಮಾಡಲಾಗಿದೆ:
​ಜೀಪ್ ಸಫಾರಿ ಆರಂಭ: 24 ಲಕ್ಷ ರೂ. ವೆಚ್ಚದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಎರಡು ಕ್ಯಾಂಪರ್ ಸಫಾರಿ ವಾಹನಗಳನ್ನು ಪರಿಚಯಿಸಲಾಗಿದೆ. ಚಿರತೆ, ಕಾಡು ನಾಯಿ, ನೀಲಗಾಯ್ ಹಾಗೂ ಕೃಷ್ಣಮೃಗಗಳ ದರ್ಶನ ಪಡೆಯಲು ಇದು ಸಹಕಾರಿಯಾಗಲಿದೆ.
ಸುಸಜ್ಜಿತ ಸಫಾರಿ ರಸ್ತೆ: 64 ಲಕ್ಷ ರೂ. ವೆಚ್ಚದಲ್ಲಿ ಎಲ್ಲಾ ಹವಾಮಾನಕ್ಕೂ ಒಗ್ಗುವಂತಹ ಸಫಾರಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಪ್ರತಿದಿನ 6 ಟ್ರಿಪ್‌ಗಳ ಸಫಾರಿ ನಡೆಸಲು ವ್ಯವಸ್ಥೆ ಮಾಡಲಾಗಿದೆ.

​ಜಲಕ್ರೀಡೆಗಳ ಮಜಾ: ಚಂದ್ರಂಪಳ್ಳಿ ಅಣೆಕಟ್ಟಿನ ಹಿನ್ನೀರಿನಲ್ಲಿ 14 ಲಕ್ಷ ರೂ. ವೆಚ್ಚದಲ್ಲಿ 12 ಆಸನಗಳ ಮೋಟಾರ್ ಬೋಟ್, ಪೆಡಲ್ ಬೋಟ್ ಹಾಗೂ ಕಯಾಕಿಂಗ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

​ವಸತಿ ಸೌಕರ್ಯ: 43 ಲಕ್ಷ ರೂ. ವೆಚ್ಚದಲ್ಲಿ ಗೊಟ್ಟಂಗೊಟ್ಟದಲ್ಲಿ ಎರಡು ಹೊಸ ಟೆಂಟ್ ಹೌಸ್‌ಗಳನ್ನು ನಿರ್ಮಿಸಲಾಗಿದೆ. ಈ ಮೂಲಕ ಚಂದ್ರಂಪಳ್ಳಿಯ ಮರದ ಕುಟೀರಗಳ ಜೊತೆಗೆ ಪ್ರವಾಸಿಗರಿಗೆ ಅರಣ್ಯದ ನಡುವೆ ವಾಸ್ತವ್ಯ ಹೂಡುವ ಅವಕಾಶ ಸಿಗಲಿದೆ.
​ಸ್ಥಳೀಯರಿಗೆ ಉದ್ಯೋಗದ ಆಸೆ
​ಕೆಕೆಆರ್ ಡಿಬಿಯ ಮ್ಯಾಕ್ರೋ ಅನುದಾನದಡಿ ಒಟ್ಟು ₹2 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಈ ಯೋಜನೆಗಳು ಕೇವಲ ಪ್ರವಾಸೋದ್ಯಮಕ್ಕೆ ಮಾತ್ರ ಸೀಮಿತವಾಗಿಲ್ಲ. ಕಳೆದ ವರ್ಷ ಯಶಸ್ವಿಯಾದ 'ನೇಚರ್ ಟ್ರೆಕ್' ಕಾರ್ಯಕ್ರಮದಂತೆ, ಈ ಹೊಸ ಯೋಜನೆಗಳು ಕೂಡ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲಿವೆ. ಇದರಿಂದ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಹೆಚ್ಚಲಿದ್ದು, ಈ ಭಾಗದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಲಾಗಿದೆ.

​"ಚಿಂಚೋಳಿ ಅಭಯಾರಣ್ಯವು ಪರಿಸರ ಸಮತೋಲನ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇಲ್ಲಿನ ಚಂದ್ರಂಪಳ್ಳಿ ಅಣೆಕಟ್ಟು ಮತ್ತು ಮಾಣಿಕ್‌ಪುರ ಜಲಪಾತದ ರಮಣೀಯತೆಗೆ ಈಗ ಆಧುನಿಕ ಸೌಲಭ್ಯಗಳ ಸಾರಥ್ಯ ಸಿಕ್ಕಂತಾಗಿದೆ."

ಚಿತ್ತಾಪುರದಲ್ಲಿ ಮಾ.17 ರಂದು ಶ್ರೀ ಮಹಾನಂದಿ ಮೂರ್ತಿ ಪ್ರತಿಷ್ಠಾಪನೆ.

ಚಿತ್ತಾಪುರ: ಪಟ್ಟಣದ ಶ್ರೀ ಸಾವಳಗಿ ಶಿವಲಿಂಗೇಶ್ವರ ಮಠ ಹಾಗೂ ಶ್ರೀ ನಾಗಾವಿ ಗೋಶಾಲೆ ಹತ್ತಿರ ನವೀಕರಣಗೊಂಡ ಶಿಲಾ ಮಂಟಪದಲ್ಲಿ ಶ್ರೀ ಮಹಾನಂದಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಸಮಾರಂಭವು ಇದೇ ಮಾರ್ಚ್ 17 ರಂದು ಬೆಳಿಗ್ಗೆ 10.45 ಕ್ಕೆ ಜರುಗಲಿದೆ ಎಂದು ಸಮಿತಿ ಅಧ್ಯಕ್ಷ ಶಾಂತಕುಮಾರ್ ಹತ್ತಿ ಹಾಗೂ ಗೋಶಾಲೆ ಅಧ್ಯಕ್ಷ ರಮೇಶ್ ಬೊಮ್ಮನಳ್ಳಿ ತಿಳಿಸಿದರು.

ಗೋಶಾಲೆಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಈ ಭಾಗದಲ್ಲಿದ್ದ ಪುರಾತನ ಹಾದಿ ಬಸವಣ್ಣನ ಮೂರ್ತಿಯು ಭಗ್ನಗೊಂಡಿತ್ತು. ಇದನ್ನು ಜೀರ್ಣೋದ್ಧಾರ ಮಾಡಬೇಕೆಂಬ ಈ ಭಾಗದ ಜನರ ಬಹುದಿನಗಳ ಕನಸು ಈಗ ನನಸಾಗಿದೆ. ಸಾರ್ವಜನಿಕರ ಹಾಗೂ ಮುಖಂಡರ ದೇಣಿಗೆಯಿಂದ ಅಂದಾಜು 5 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಶಿಲಾ ಮಂಟಪ ಹಾಗೂ 3 ಅಡಿ ಎತ್ತರದ ಭವ್ಯ ಮಹಾನಂದಿ ಮೂರ್ತಿಯನ್ನು ಸ್ಥಾಪಿಸಲಾಗುತ್ತಿದೆ," ಎಂದರು.

ಕಾರ್ಯಕ್ರಮದಲ್ಲಿ ಮುಗಳಕೋಡ ಜಿಡಗಾ ಮಠದ ಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು, ಸಾವಳಗಿ(ಬಿ) ಸಂಸ್ಥಾನ ಮಠದ ಶ್ರೀ ಗುರುನಾಥ ಮಹಾಸ್ವಾಮಿಗಳು, ಕಂಬಳೇಶ್ವರ ಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು.ಸಮಿತಿ ಅಧ್ಯಕ್ಷ ಶಾಂತಕುಮಾರ್ ಹತ್ತಿ. ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಶ್ರೀ ರಾಚೋಟೇಶ್ವರ ವೈದಿಕ ಬಳಗದಿಂದ ಮಹಾನಂದಿಗೆ ಕಾಶಿ ವಿಶ್ವನಾಥ ಕ್ಷೇತ್ರದ ಶೈಲಿಯ ಮಹಾಆರತಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಸಮಿತಿ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಚಂದ್ರಶೇಖರ ಉಟಗೂರ್, ಅನಿಲ್ ವಡ್ಡಡಗಿ, ಬಸವರಾಜ ಕಾಳಗಿ, ಬಸವರಾಜ ಸಂಕನೂರ, ಬಸವರಾಜ ಹೂಗಾರ, ರಮೇಶ್ ಕಾಳನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಶುಕ್ರವಾರ, ಮಾರ್ಚ್ 13, 2026

ದೇವಿಂದ್ರ ಅರಣಕಲ್ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆ.

​​ಚಿತ್ತಾಪುರ: ಪಟ್ಟಣದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ದೇವಿಂದ್ರ ಅರಣಕಲ್ (ಭಾಗೋಡಿ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಅಶೋಕ ಹರನಾಳ (ವಾಡಿ) ಅವರು ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

​ಪಟ್ಟಣದ ಸಂಘದ ಕಚೇರಿಯಲ್ಲಿ ಶುಕ್ರವಾರದಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ನಡೆಯಿತು. ಈ ವೇಳೆ ಅಧ್ಯಕ್ಷ ಸ್ಥಾನಕ್ಕೆ ದೇವಿಂದ್ರ ಅರಣಕಲ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅಶೋಕ ಹರನಾಳ ಅವರು ಮಾತ್ರ ತಮ್ಮ ಉಮೇದುವಾರಿಕೆ (ನಾಮಪತ್ರ) ಸಲ್ಲಿಸಿದ್ದರು.
​ನಿಗದಿತ ಸಮಯದವರೆಗೆ ಇವರ ವಿರುದ್ಧ ಬೇರೆ ಯಾವುದೇ ಅಭ್ಯರ್ಥಿಗಳು ಪ್ರತಿಸ್ಪರ್ಧಿಯಾಗಿ ನಾಮಪತ್ರ ಸಲ್ಲಿಸದ ಕಾರಣ, ಇಬ್ಬರನ್ನೂ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಅಫಜಲಪುರ ಸಹಕಾರ ಅಭಿವೃದ್ಧಿ ಅಧಿಕಾರಿ ಹಾಗೂ ಚುನಾವಣಾಧಿಕಾರಿಯಾಗಿರುವ ಚಾಂದ್ ಭಾಷಾ ಅನ್ಸಾರಿ ಅವರು ಅಧಿಕೃತವಾಗಿ ಘೋಷಿಸಿದ್ದಾರೆ.

ಒಕ್ಕಲತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ನೂತನ ನಿರ್ದೇಶಕರಾದ ಈರಯ್ಯ ಬೆಣ್ಣೂರ, ಭೀಮಾಶಂಕರ ಗುರಣ್ಣ, ಅಬ್ದುಲ್ ರಶೀದ್ ಯಾದಗೀರ, ಶ್ರೀನಿವಾಸ, ರಾಚಪ್ಪು, ವಿಜಯಕುಮಾರ, ಮಹೇಶ ಧರಿ, ಅಂಬರೀಶ ಸುಲೇಗಾಂವ್, ಅಶೋಕ ಹರನಾಳ. ಶ್ರೀಮತಿ ಗೌರಮ್ಮ, ಶ್ರೀಮತಿ ಸುನೀತಾ ವಗ್ಗರ, ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಹಾಗೂ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಭೀಮಣ್ಣ ಸಾಲಿ, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ, ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಬಿಜೆಪಿ ಮುಖಂಡರಾದ ಭೀಮರೆಡ್ಡಿ ಕುರಾಳ, ವೀರಣ್ಣ ಯಾರಿ, ಭೀಮಶ್ಯಾ ಜೀರೋಳ್ಳಿ, ಆನಂದ ಪಾಟೀಲ ನರಿಬೋಳ, ನಾಗರಾಜ ಹೂಗಾರ, ಮಲ್ಲಿಕಾರ್ಜುನ ಇಟಗಿ, ಶಿವರಾಮ್ ಚವ್ಹಾಣ, ಕಾಂಗ್ರೆಸ್ ಮುಖಂಡರಾದ ರಸೂಲ್ ಮುಸ್ತಫಾ, ನಾಗರೆಡ್ಡಿ ಗೋಪಸೇನ್, ಹಣಮಂತ ಸಂಕನೂ‌ರ್, ಸಂತೋಷ ಪೂಜಾರಿ, ದೇವು ಯಾಬಾಳ, ಮಹೇಶ್ ಜಾಯಿ, ಸಿದ್ದು ಭೋವಿ ಸೇರಿದಂತೆ ಇತರರು ಇದ್ದರು

ಗುರುವಾರ, ಮಾರ್ಚ್ 12, 2026

ಪ್ರಿಯಾಂಕ್ ಖರ್ಗೆಯವರ ಅಭಿವೃದ್ಧಿ ಕಾರ್ಯಕಂಡು ಬಿಜೆಪಿ ನಾಯಕರಿಗೆ ದಿಗ್ಭ್ರಮೆ: ಎಪಿಎಂಸಿ ಮಾಜಿ ಅಧ್ಯಕ್ಷ ತಿರುಗೇಟು

ಚಿತ್ತಾಪೂರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಸತತ ಪ್ರಯತ್ನದಿಂದ ಚಿತ್ತಾಪೂರ ಕ್ಷೇತ್ರಕ್ಕೆ ರಾಜ್ಯದ 224 ಶಾಸಕರ ಪೈಕಿ ಅತಿ ಹೆಚ್ಚು ಅನುದಾನ ತಂದಿರುವುದನ್ನು ಕಂಡು ಬಿಜೆಪಿ ನಾಯಕರು ದಿಗ್ಭ್ರಮೆಗೊಂಡಿದ್ದಾರೆ. ಹತಾಶೆಯಿಂದ ಏನೇನೋ ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಾಜಿ ಅಧ್ಯಕ್ಷ ಸಿದ್ದುಗೌಡ ಅಫಜಲಪೂರಕರ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಿಜೆಪಿ ನಾಯಕರ ಆರೋಪಗಳಿಗೆ ಎಳೆಎಳೆಯಾಗಿ ಉತ್ತರಿಸಿದ ಅವರು ನಿಯಮಾವಳಿಗಳ ಅರಿವಿಲ್ಲದ ಬಿಜೆಪಿ ನಾಯಕರು ಸಚಿವ ಪ್ರಿಯಾಂಕ್ ಖರ್ಗೆಯವರು ಕಾಂಗ್ರೆಸ್ ಕಾರ್ಯಕರ್ತರ ಜೇಬು ತುಂಬುತ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, "ಸರ್ಕಾರದ ಯಾವುದೇ ಅನುದಾನವಾದರೂ ಅದು ನಿರ್ದಿಷ್ಟ ನಿಯಮಾನುಸಾರವೇ ಕಾರ್ಯರೂಪಕ್ಕೆ ಬರುತ್ತದೆ. ಆ ಪ್ರಕ್ರಿಯೆಯನ್ನು ಯಾರೂ ಮನಬಂದಂತೆ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂಬ ಸಾಮಾನ್ಯ ಅರಿವು ಕೂಡ ಬಿಜೆಪಿ ನಾಯಕರಿಗೆ ಮರೆತುಹೋಗಿರುವುದು ವಿಪರ್ಯಾಸ" ಎಂದು ಟೀಕಿಸಿದ್ದಾರೆ.

"ಬಿಜೆಪಿ ನಾಯಕರು ಪ್ರಿಯಾಂಕ್ ಖರ್ಗೆಯವರ ಅಭಿವೃದ್ಧಿ ಕಾರ್ಯಗಳನ್ನು 'ನಾಟಕ' ಎಂದು ಜರಿಯುತ್ತಿದ್ದಾರೆ. ಆದರೆ, ಇದು ಕೇವಲ ಆಶ್ವಾಸನೆಯಲ್ಲ, ಚಿತ್ತಾಪೂರ ಜನತೆಯ ಅಭಿವೃದ್ಧಿಗಾಗಿ ಸರ್ಕಾರದಿಂದ ತಂದಿರುವ ಸಾವಿರ ಕೋಟಿ ರೂಪಾಯಿಗಳ ವಾಸ್ತವ ಅನುದಾನ. ಕೇವಲ ಆಶ್ವಾಸನೆಗೂ ಮತ್ತು ಮಂಜೂರಾಗಿರುವ ಅನುದಾನಕ್ಕೂ ಇರುವ ವ್ಯತ್ಯಾಸ ತಿಳಿಯದೆ ಬಿಜೆಪಿಗರು ಕಂಗಾಲಾಗಿದ್ದಾರೆ" ಎಂದು ಲೇವಡಿ ಮಾಡಿದ್ದಾರೆ.

ರೈತರ ವಿಚಾರದಲ್ಲಿ ಬಿಜೆಪಿಯ ದ್ವಂದ್ವ ನಿಲುವನ್ನು ಪ್ರಶ್ನಿಸಿದ ಸಿದ್ದುಗೌಡ ಅವರು, "ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ತೊಗರಿ ಬೆಳೆಗೆ ನೆಟೆರೋಗ ಬಂದು ರೈತರು ಕಂಗಾಲಾಗಿದ್ದರು. ಆಗ ಚಿತ್ತಾಪೂರದ ಯಾವೊಬ್ಬ ಬಿಜೆಪಿ ನಾಯಕನೂ ರೈತರ ಪರ ದನಿ ಎತ್ತಲಿಲ್ಲ. ಅಂದು ರೈತರ ಪರವಾಗಿ ಬೀದಿಗಿಳಿದು, ಸರ್ಕಾರದ ವಿರುದ್ಧ ಹೋರಾಟ ನಡೆಸಿ ಬೆಳೆ ಪರಿಹಾರ ಕೊಡಿಸಿದ ಏಕೈಕ ನಾಯಕ ಪ್ರಿಯಾಂಕ್ ಖರ್ಗೆ" ಎಂದು ಸ್ಮರಿಸಿದ್ದಾರೆ.

"ಚಿತ್ತಾಪೂರಿನಲ್ಲಿಯೇ ಹುಟ್ಟಿ ಬೆಳೆದ ಬಿಜೆಪಿ ನಾಯಕರು, ಒಮ್ಮೆ ಕಣ್ಣುಬಿಟ್ಟು ಇಲ್ಲಿನ ಶಾಲಾ-ಕಾಲೇಜುಗಳು ಯಾವ ರೀತಿ ಅಭಿವೃದ್ಧಿ ಹೊಂದಿವೆ ಎಂಬುದನ್ನು ನೋಡಲಿ. ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡಿಕೊಂಡು, ನಾಯಕರನಿಸಿಕೊಂಡವರು ಇಂತಹ ಬಾಲಿಶ ಹೇಳಿಕೆಗಳನ್ನು ನೀಡುವುದು ಅವರಿಗೆ ಶೋಭೆ ತರುವಂಥದ್ದಲ್ಲ" ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿರುಗೇಟು ನೀಡಿದ್ದಾರೆ.

ರಾಷ್ಟ್ರೀಯ ಸಂಘಟನೆ: ರಾಜ್ಯ ಪ್ರಚಾರ ಸಮಿತಿಗೆ ಜಗದೇವ ನೇಮಕ.

ಚಿತ್ತಾಪುರ: ರಾಷ್ಟ್ರಮಟ್ಟದಲ್ಲಿ ಬೃಹತ್ ಜಾಲವನ್ನು ಹೊಂದಿರುವ ಪ್ರತಿಷ್ಠಿತ 'ಅಖಿಲ ಭಾರತ ಕುಂಬಾರರ ಮಹಾಸಭಾದ' ಕರ್ನಾಟಕ ರಾಜ್ಯ ಪ್ರಚಾರ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಚಿತ್ತಾಪುರದ ಜಗದೇವ ಎಸ್. ಕುಂಬಾರ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಸಂಘಟನೆಯ ರಾಜ್ಯಾಧ್ಯಕ್ಷರಾದ ನಿತ್ಯಾಭರಣ ಅವರು ಅಧಿಕೃತ ಆದೇಶ ಪತ್ರವನ್ನು ಹೊರಡಿಸಿದ್ದಾರೆ.

ಸಮಾಜದ ಅಭಿವೃದ್ಧಿಗಾಗಿ ಜಗದೇವ ಅವರು ನೀಡುತ್ತಿರುವ ನಿರಂತರ ಸೇವೆ ಹಾಗೂ ಸಂಘಟನೆಯ ಉದ್ದೇಶಗಳ ಮೇಲಿರುವ ಅವರ ಬದ್ಧತೆಯನ್ನು ಗುರುತಿಸಿ ರಾಷ್ಟ್ರೀಯ ಮಟ್ಟದ ಈ ಸಂಘಟನೆಯ ಮಹತ್ವದ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ.

ಕರ್ನಾಟಕ ರಾಜ್ಯ ಘಟಕದ ಅಧೀನದಲ್ಲಿ ಸಂಘಟನೆಯ ಚಟುವಟಿಕೆಗಳನ್ನು ಮುನ್ನಡೆಸುವ ಪೂರ್ಣ ಅಧಿಕಾರವನ್ನು ಹೊಂದಿದ್ದಾರೆ. ಪ್ರಮುಖವಾಗಿ ಸಮಾಜದ ಸರ್ವಾಂಗೀಣ ಅಭಿವೃದ್ಧಿ, ಯುವ ಸಬಲೀಕರಣ ಹಾಗೂ ಹಿಂದುಳಿದ ವರ್ಗಗಳ ಏಳಿಗೆಗಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವ ಗುರುತರ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ.

ತಮ್ಮ ಹುದ್ದೆಯ ವ್ಯಾಪ್ತಿಯಲ್ಲಿ ಬರುವ ವಿಭಾಗೀಯ ಸಮಿತಿಗಳನ್ನು ರಚಿಸುವ ಹಾಗೂ ಅಗತ್ಯ ಪದಾಧಿಕಾರಿಗಳನ್ನು ನೇಮಿಸುವ ಅಧಿಕಾರವನ್ನು ಜಗದೇವ ಅವರಿಗೆ ನೀಡಲಾಗಿದೆ. ವಿಭಾಗ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳನ್ನು ಆಯ್ಕೆ ಮಾಡುವಾಗ ಸಂಘಟನೆಗೆ ಬದ್ಧರಾಗಿರುವ, ಸೂಕ್ತ ಅನುಭವ ಹೊಂದಿರುವ ಸದಸ್ಯರನ್ನು ಗುರುತಿಸುವುದು. ಅಲ್ಲದೆ, ರಾಜ್ಯಾಧ್ಯಕ್ಷರು ಹಾಗೂ ಆಯಾ ಭಾಗದ ಹಿರಿಯ ನಾಯಕರೊಂದಿಗೆ ಚರ್ಚಿಸಿ ನೇಮಕಾತಿ ಪ್ರಕ್ರಿಯೆ ನಡೆಸುವುದು. ಅಖಿಲ ಭಾರತ ಕುಂಬಾರರ ಮಹಾಸಭಾದ ನೋಂದಾಯಿತ ನಿಯಮಗಳು ಹಾಗೂ ಶಿಸ್ತಿಗೆ ಒಳಪಟ್ಟು, ರಾಜ್ಯ ಮತ್ತು ರಾಷ್ಟ್ರೀಯ ನಾಯಕತ್ವದ ಮಾರ್ಗದರ್ಶನದಲ್ಲಿ ಸಂಘಟನೆಯನ್ನು ಬಲಪಡಿಸುವುದು.

"ಜಗದೇವ ಕುಂಬಾರ ಅವರ ಸೇವೆಯು ನಮ್ಮ ಮಹಾಸಭೆಗೆ ಮತ್ತಷ್ಟು ಶಕ್ತಿ ಮತ್ತು ಗೌರವವನ್ನು ತಂದುಕೊಡಲಿದೆ ಎಂಬ ದೃಢ ವಿಶ್ವಾಸ ನಮ್ಮದಾಗಿದೆ. ಸಮಾಜದ ಹಿತಕ್ಕಾಗಿ ಅವರು ಕೈಗೊಳ್ಳುವ ಎಲ್ಲಾ ಯಶಸ್ವಿ ಕಾರ್ಯಗಳಿಗೆ ಸಂಘಟನೆಯ ಸಂಪೂರ್ಣ ಬೆಂಬಲವಿರುತ್ತದೆ" ಎಂದು ರಾಜ್ಯಾಧ್ಯಕ್ಷ ನಿತ್ಯಾಭರಣ ಅವರು ಪ್ರಕಟಣೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

ಮಾಜಿ ಶಾಸಕ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ: ಬಿಜೆಪಿ ಆಕ್ರೋಶ.

​ಚಿತ್ತಾಪುರ: ಸೇಡಂ ಕ್ಷೇತ್ರದ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಅಸಂವಿಧಾನಿಕ ಪದಗಳಿಂದ ನಿಂದಿಸಿರುವುದನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ್ ತೀವ್ರವಾಗಿ ಖಂಡಿಸಿದ್ದಾರೆ.

​ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟನೆಯ ಕುರಿತು ಈಗಾಗಲೇ ಕಲಬುರಗಿಯ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

​ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ಅಭಿವೃದ್ಧಿಗೆ ಮೀಸಲಿದ್ದ 39 ಸಾವಿರ ಕೋಟಿ ರೂಪಾಯಿ ಅನುದಾನ ದುರ್ಬಳಕೆಯಾಗಿದೆ ಎಂದು ರಾಜಕುಮಾರ್ ಪಾಟೀಲ್ ತೇಲ್ಕೂರ್ ಪತ್ರಿಕಾ ಹೇಳಿಕೆ ನೀಡಿದ್ದರು. ಇದನ್ನು ಸಹಿಸದ ಸಚಿವರ ಬೆಂಬಲಿಗ ಚಂದ್ರಶೇಖರ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ತೇಲ್ಕೂರ್ ಅವರ ವಿರುದ್ಧ ಉದ್ದೇಶಪೂರ್ವಕವಾಗಿ ಅಶ್ಲೀಲ ಹಾಗೂ ಕೆಟ್ಟ ಪದಗಳನ್ನು ಬಳಸಿ ಕಾಮೆಂಟ್ ಮಾಡಿದ್ದಾನೆ ಎಂದು ಬೆಣ್ಣೂರಕರ್ ದೂರಿದರು.

​ಯಾವಾಗಲೂ ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಮಾತನಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರು, ದಲಿತರ ಅಭಿವೃದ್ಧಿಯ ಕೋಟ್ಯಂತರ ರೂಪಾಯಿ ಹಣ ದುರುಪಯೋಗವಾದರೂ ಮೌನವಾಗಿರುವುದೇಕೆ? ಈ ಕುರಿತು ಅವರು ಬಹಿರಂಗವಾಗಿ ಮಾತನಾಡಲಿ ಎಂದು ಬೆಣ್ಣೂರಕರ್ ಸವಾಲು ಹಾಕಿದರು.

​ಎಲ್ಲಾ ಸಮುದಾಯಗಳನ್ನು ಸಮನಾಗಿ ಕೊಂಡೊಯ್ಯುವ ರಾಜಕುಮಾರ್ ಪಾಟೀಲ್ ತೇಲ್ಕೂರ್ ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ಅಥವಾ ನಿಂದಿಸಿದರೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜನಶೆಟ್ಟಿ, ನಾಗರಾಜ ಹೂಗಾರ, ಈಶ್ವರ ದೊಡ್ಡಮನಿ, ಮಲ್ಲಿಕಾರ್ಜುನ ಇಟಗಿ, ಶಿವರಾಂ ಚವ್ಹಾಣ್, ಆನಂದ ಇಂಗಿಕಲ್, ನವೀನ್ ದಂಡೋತಿ. ಸೇರಿದಂತೆ ಇತರರು ಇದ್ದರು.

​"ರಾಜಕಾರಣದಲ್ಲಿ ಆರೋಗ್ಯಕರ ಟೀಕೆ ಮತ್ತು ಪ್ರಶ್ನೆಗಳಿರಲಿ. ಆದರೆ ಪ್ರಶ್ನೆ ಮಾಡಿದವರ ವಿರುದ್ಧವೇ ಅಸಂವಿಧಾನಿಕ ಪದಗಳಿಂದ ನಿಂದಿಸುವುದು ಸರಿಯಲ್ಲ. ಜಿಲ್ಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ತೇಲ್ಕೂರ್ ಅವರು ಸಮರ್ಥವಾಗಿ ಮಾತನಾಡುತ್ತಾರೆ ಎನ್ನುವ ಏಕೈಕ ಕಾರಣಕ್ಕೆ ಈ ರೀತಿ ಗುರಿ ಮಾಡಲಾಗುತ್ತಿದೆ."

— ಬಸವರಾಜ ಬೆಣ್ಣೂರಕರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ.

ಬುಧವಾರ, ಮಾರ್ಚ್ 11, 2026

ಪರೀಕ್ಷೆ ಎದುರಿಸಲು ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಸಿಡಿಪಿಒ.

ಚಿತ್ತಾಪುರ: ತಾಲ್ಲೂಕಿನ ಭಾಗೋಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭವು ಅತ್ಯಂತ ಅರ್ಥಪೂರ್ಣವಾಗಿ ಜರುಗಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲ್ಲೂಕು ಸಿಡಿಪಿಒ ಆರತಿ ಪಾಟೀಲ ಅವರು ಮಾತನಾಡಿ, "ವಿದ್ಯಾರ್ಥಿ ಜೀವನದಲ್ಲಿ ಹತ್ತನೇ ತರಗತಿಯು ಅತ್ಯಂತ ಪ್ರಮುಖ ಘಟ್ಟವಾಗಿದೆ. ಶಿಸ್ತು ಮತ್ತು ಸಮಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಪರೀಕ್ಷೆಯನ್ನು ಎದುರಿಸಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ," ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

​ರಾಯಚೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಡಾ. ಮಹಾಂತಗೌಡ ಪಾಟೀಲ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಶಿಕ್ಷಣದ ಜೊತೆಗೆ ಕೃಷಿ ಮತ್ತು ತಾಂತ್ರಿಕ ಜ್ಞಾನದ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟರು. ಗ್ರಾಮದ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಇಂದು ಉನ್ನತ ಮಟ್ಟಕ್ಕೆ ಏರುತ್ತಿರುವುದು ಹೆಮ್ಮೆಯ ವಿಷಯ ಎಂದರು.

​ಎಸ್‌ಡಿಎಂಸಿ ಅಧ್ಯಕ್ಷ ದೇವೇಂದ್ರ ಡೋಣಗಾಂವ್ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳು ಆತ್ಮವಿಶ್ವಾಸ ಕಳೆದುಕೊಳ್ಳದೆ ಧೈರ್ಯವಾಗಿ ಪರೀಕ್ಷೆ ಬರೆಯಬೇಕು ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ರಾಜೇಂದ್ರಪ್ಪ ಅರಣಕಲ್ ಅವರು ಕೂಡ ತಮ್ಮ ವಿಚಾರಗಳನ್ನು ಹಂಚಿಕೊಂಡರು.

​ಈ ಸಂದರ್ಭದಲ್ಲಿ ಶಾಲೆ ಮುಖ್ಯಗುರುಗಳಾದ ರವೀಂದ್ರ ರೆಡ್ಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಕೋರಿದರು. ವೇದಿಕೆಯ ಮೇಲೆ ಪ್ರಮುಖರಾದ ಶರಣಬಸಪ್ಪ ಎನ್. ಬೆಂಕಿ, ರಮೇಶ ನೀಲಕಂಠ, ಮಲ್ಲಿಕಾರ್ಜುನ ಏರಿ, ಮಹಾಂತಪ್ಪ ಹಾಸಬಾ, ಶಿವಯೋಗಿ ಏರಿ, ವಸಂತ ಸೂಗೂರು ಹಾಗೂ ಸೂರ್ಯಕಾಂತ್ ನವದಗಿ ಸೇರಿದಂತೆ ಶಾಲೆಯ ಸರ್ವ ಶಿಕ್ಷಕರು ಮತ್ತು ಶಿಕ್ಷಕಿಯರು ಉಪಸ್ಥಿತರಿದ್ದರು.

​ಸಹಶಿಕ್ಷಕ ಬಸಪ್ಪ ಎಂಬತನಾಳ ಅವರು ಎಲ್ಲರನ್ನೂ ಸ್ವಾಗತಿಸಿದರು. ದೈಹಿಕ ಶಿಕ್ಷಕಿ ಸುಧಾ ಮೇಡಂ ಅವರು ವಂದನಾರ್ಪಣೆ ಮಾಡಿದರು.

ರಾವೂರ್‌ನಲ್ಲಿ ಸೌಹಾರ್ದತೆಯ ಇಫ್ತಿಯಾರ್ ಕೂಟ: ಭಾವೈಕ್ಯತೆಯ ಸಂದೇಶ ಸಾರಿದ ಗ್ರಾಮಸ್ಥರು

​ ರಾವೂರ್: ತಾಲೂಕಿನ ರಾವೂರ್ ಗ್ರಾಮದ ಮಕ್ಕಾ ಮಜೀದ್‌ನಲ್ಲಿ ಈರಣ್ಣ ಗೌಡಾ ಯರಗಲ್ ಮತ್ತು ಗುರುಶಾಂತಲಿಂಗ್ ಆಗ್ರು ಅವರ ನೇತೃತ್ವದಲ್ಲಿ ಇತ್ತೀಚೆಗೆ ಸೌಹಾರ್ದ...