ಕನಕದಾಸರ ಆದರ್ಶ ಮೈಗೂಡಿಸಿಕೊಳ್ಳಿ : ಪ್ರಿಯಾಂಕ್ ಖರ್ಗೆ.
ಚಿತ್ತಾಪೂರ: ಭಕ್ತ ಕನಕದಾಸರ ಬಗ್ಗೆ ಎಲ್ಲರೂ ಆಳವಾಗಿ ತಿಳಿದುಕೊಂಡು ಅವರ ಮಾರ್ಗವನ್ನು ಅನುಸರಿಸುವುದರ ಜೊತೆಗೆ ಯುವಕರು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ತಾಲೂಕ ಆಡಳಿತ ವತಿಯಿಂದ ತಾಲೂಕ ಪಂಚಾಯತ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ದಾಸ ಶ್ರೇಷ್ಠ ಕನಕದಾಸರ ಹಾಗೂ ವೀರರಾಣಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ದಾರ್ಶನಿಕರ, ಶರಣರನ್ನು ಕೇವಲ ಒಂದೇ ಜಾತಿಗೆ ಸೀಮಿತಗೊಳಿಸಿದ್ದರ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಶಾಸಕರು, ಕನಕದಾಸರಂತ ದಾಸಶ್ರೇಷ್ಠ ರಂತವರು ಎಲ್ಲ ಜಾತಿ ಧರ್ಮಕ್ಕೆ ಸೇರಿದವರಾಗಿದ್ದಾರೆ. ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅಂದಿನ ಕಾಲದಲ್ಲೇ ಕನಕದಾಸರು ಟೀಕಿಸಿದ್ದರು. ಅದರ ವಿರುದ್ದ ಹೋರಾಟ ನಡೆಸಿದರು. ಆದರೆ ಈಗಲೂ ಅಸಮಾನತೆ ಇದೆ ಎಂದು ವಿಷಾದಿಸಿದರು.
ಸರ್ಕಾರ ಯಾವುದೇ ಇರಲಿ ಎಲ್ಲರೂ ಒಂದಾಗಿ ಯೋಜನೆಗೆಳ ಫಲ ಪಡೆಯಬೇಕು ಎಂದು ಕರೆ ನೀಡಿದ ಶಾಸಕರು, ಬಿಜೆಪಿ ಸರ್ಕಾರ ಇತ್ತೀಚಿಗೆ ಕಲಬುರಗಿಯಲ್ಲಿ ಹಿಂದುಳಿದ ವರ್ಗದ ಸಮಾವೇಶ ನಡೆಸಲಾಯಿತು. ಆದರೆ ಕೇವಲ ಸಮಾವೇಶ ನಡೆಸುವುದರಿಂದ ಹಿಂದುಳಿದವರ ಆರ್ಥಿಕ ಸಬಲತೆಗೆ ಸಹಕಾರಿಯಾಗದು. ಹಾಗಾಗಬೇಕಾದರೆ ಸರ್ಕಾರದ ಎಲ್ಲ ಯೋಜನೆಗಳು ಕಡ್ಡಾಯವಾಗಿ ಆ ಭಾಗದ ಜನರಿಗೆ ತಲುಪಬೇಕು ಎಂದರು.
ಕೋಲಿ ಹಾಗೂ ಕುರುಬರಿಗೆ ಎಸ್ಟಿಗೆ ಸೇರಿಸಲು ಹೋರಾಟ ನಡೆಯುತ್ತಲೇ ಇದೆ. ಆದರೂ ಪ್ರಯೋಜನವಾಗಿಲ್ಲ. ಸುಳ್ಳು ಹೇಳಿ ದಾರಿ ತಪ್ಪಿಸಿದ ಕೆಲವರು ಇದೂವರೆಗೆ ಯಾವುದೇ ಪ್ರಯತ್ನ ಪಡಲಿಲ್ಲ ಎಂದು ಇತ್ತೀಚೆಗೆ ನಾನು ಕೇಂದ್ರ ಸಚಿವ ಮುಂಡಾ ಅವರನ್ನು ಭೇಟಿ ಮಾಡಿದಾಗ ತಿಳಿದುಬಂತು ಎಂದರು.
ಹಿಂದುಳಿದ ವರ್ಗದವರು ಶಿಕ್ಷಣದ ಬಗ್ಗೆ ಗಮನಹರಿಸಬೇಕು ಎಂದು ಕರೆ ನೀಡಿದ ಶಾಸಕರು, ಶಿಕ್ಷಣದಿಂದ ಮಾತ್ರ ಆರ್ಥಿಕ ಸಮಾನತೆ ಹಾಗೂ ಸದೃಢ ಸಮಾಜ ನಿರ್ಮಾಣ ಸಾಧ್ಯ ಇದನ್ನು ಎಲ್ಲರೂ ಅರಿತುಕೊಳ್ಳಬೇಕು. ಬಸವಣ್ಣನವರ ಅರಿವೇ ಗುರು ಎನ್ನುವ ಮಾತಿನಂತೆ ನಡೆದುಕೊಳ್ಳಬೇಕು.ಇಂದಿನ ಯವಕರು ಓದಬೇಕು ಇತಿಹಾಸ ತಿಳಿದುಕೊಳ್ಳಬೇಕು ಅಂದಾಗಲೇ ಮಾತ್ರ ಮೌಲ್ಯಯುತ ಸಮಾಜ ನಿರ್ಮಾಣ ಎಂದು ಕರೆ ನೀಡಿದರು.
ಕಾಂಗ್ರೆಸ್ ಯುವ ಮುಖಂಡ ಸಂತೋಷ ಪೂಜಾರಿ ಪ್ರಾಸ್ತಾವಿಕ ಮಾತನಾಡಿ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಕನಕ ವೃತ್ತಗಳ ನಿರ್ಮಾಣ ಮಾಡಿಸಿದ್ದಾರೆ ಅಷ್ಟೇ ಅಲ್ಲದೇ ನಮ್ಮ ಸಮಾಜದ ಮೇಲೆ ಅಪಾರವಾದ ಕಾಳಜಿ ಹೊಂದಿದ್ದಾರೆ ಅದ್ದರಿಂದ ನಾವೂ ಅವರ ಜೊತೆ ಇರೋಣ ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ಮಹಾಂತೇಶ ಬಾಬಜೀ ಕನಕದಾಸರ ಆದರ್ಶವನ್ನು ನಾವೆಲ್ಲರೂ ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಕುಲಕುಲ ಕುಲ ಎಂದು ಹೊಡದಾಡದಿರಿ ನೀವು ನಿಮ್ಮ ಕುಲದ ನೆಲೆಯನ್ನು ಬಲ್ಲಿರಾ!! ಎಂದು ಅಂದಿನ ಕಾಲದ ಜಾತಿ ವ್ಯವಸ್ಥೆಯ ವಿರುದ್ದ ತಮ್ಮ ಕೀರ್ತನೆ ಮೂಲಕ ಚಾಟಿ ಬೀಸಿದ್ದರು ಎಂದರು.
ಕನಕದಾಸರಿಗೆ ವಿಜಯನಗರ ಸಾಮ್ರಾಜ್ಯದ ರಕ್ತಪಾತ ನೋಡಿ ಬೇಸರ ವ್ಯಕ್ತಪಡಿಸಿದ್ದರು. ಯುದ್ದ ನೋಡಿ ವೈರಾಗ್ಯ ಉಂಟಾಗಿ ಮುಂದೊಂದು ದಿನ ಕನಕದಾಸರಾಗಿ ಅವರು ಹೆಸರು ಮಾಡಿದರು. ಅವರ ಕೀರ್ತನೆಗಳ ಜೊತೆಗೆ ರಾಮಧಾನ್ಯ ಚರಿತೆ, ಮೋಹಿನಿ ತರಂಗಣಿ,ನಳ ಚರಿತ್ರೆ ಸೇರಿದಂತೆ ಹಲವಾರು ಕಾವ್ಯಗಳನ್ನು ರಚಿಸಿದ್ದರು ಎಂದು ದಾಸ ಶ್ರೇಷ್ಠರನ್ನು ನೆನೆದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಉಪಾಧ್ಯಕ್ಷ ಶ್ರೀಮತಿ ಶೃತಿ ಪೂಜಾರಿ, ಆನಂದ ಪಾಟೀಲ ನರಿಬೋಳ, ಬಸವರಾಜ ಪಾಟೀಲ, ಮಲ್ಲಿಕಾರ್ಜುನ ಪೂಜಾರಿ, ಭೀಮಣ್ಣ ಸಾಲಿ, ಮಾಜಿ ಜಿಪಂ ಅಧ್ಯಕ್ಷ ರಮೇಶ ಮರಗೋಳ, ತಹಸೀಲ್ದಾರ್ ಉಮಾಕಾಂತ ಹಳ್ಳೆ, ತಾಪಂ ಇಓ ನೀಲಗಂಗಾ ಬಬಲಾದ, ಸಿಪಿಐ ಪ್ರಕಾಶ ಯಾತನೂರ, ಪ್ರಭು ಗಂಗಾಣಿ, ಸೇರಿದಂತೆ ಮತ್ತಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ