ಚಿತ್ತಾಪುರ: ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿರುವ ಗೋವಿನ ಸಂತತಿಯನ್ನು ಉಳಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಹೀಗಾಗಿ ದೇಶಿ ಗೋವಂಶವನ್ನು ‘ರಾಷ್ಟ್ರಮಾತೆ’ ಎಂದು ಘೋಷಿಸಲು ರಾಜ್ಯ ಸರ್ಕಾರವು ಕೇಂದ್ರಕ್ಕೆ ವಿಶೇಷ ಶಿಫಾರಸು ಕಳುಹಿಸಬೇಕು ಎಂದು ಶ್ರೀರಾಮ ಸೇನೆಯ ಕಾರ್ಯಕರ್ತರು ಒತ್ತಾಯಿಸಿದರು.
ಪಟ್ಟಣದ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರ ಮೂಲಕ ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಸಂಘಟನೆಯ ಮುಖಂಡರು ಮಾತನಾಡಿದರು.
ಸಂವಿಧಾನದ 48ನೇ ವಿಧಿಗೆ ಅಗತ್ಯ ತಿದ್ದುಪಡಿ ತಂದು ದೇಶಾದ್ಯಂತ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದರ ಜೊತೆಗೆ, ರಾಜ್ಯ ಮಟ್ಟದಲ್ಲೂ ದೇಶಿ ಗೋವಂಶವನ್ನು ‘ರಾಜ್ಯ ಮಾತೆ’ ಎಂದು ಘೋಷಿಸಬೇಕು. ಗೋ ಕಳ್ಳಸಾಗಣೆ ಮತ್ತು ಹತ್ಯೆಯನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸಬೇಕು. ತಪ್ಪಿತಸ್ಥರಿಗೆ ಆಜೀವ ಕಾರಾಗೃಹ ಶಿಕ್ಷೆ ಮತ್ತು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತಹ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಶ್ರೀರಾಮ ಸೇನೆಯ ಮುಖಂಡ ವಿಶ್ವಾರಾಧ್ಯ ತಳವಾರ ಮಾತನಾಡಿ, "ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ನಂದಿಶಾಲೆ’ ಹಾಗೂ ಜಿಲ್ಲಾ ಮಟ್ಟದಲ್ಲಿ ಕನಿಷ್ಠ ಒಂದು ಮಾದರಿ ‘ಗೋ ಅಭಯಾರಣ್ಯ’ ಸ್ಥಾಪಿಸಬೇಕು. ಹೆದ್ದಾರಿಗಳಲ್ಲಿ ಅಪಘಾತಕ್ಕೀಡಾಗುವ ಗೋವುಗಳ ಚಿಕಿತ್ಸೆಗಾಗಿ ಪ್ರತಿ 50 ರಿಂದ 100 ಕಿ.ಮೀ ಅಂತರದಲ್ಲಿ ‘ಗೋ-ವಾಹಿನಿ’ ಆಂಬುಲೆನ್ಸ್ ಮತ್ತು ಟ್ರಾಮಾ ಸೆಂಟರ್ಗಳ ವ್ಯವಸ್ಥೆ ಕಲ್ಪಿಸಬೇಕು," ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಮುಖಂಡರಾದ ವಾಲ್ಮೀಕ ಚವ್ಹಾಣ, ಸಂಜಯ ರಾಠೋಡ, ವೆಂಕಟೇಶ ಚವ್ಹಾಣ, ಆಕಾಶ, ಗುರುರಾಜ, ರೋಹನ್ ಜಾಧವ್, ಅರುಣ ಪವಾರ, ಈಶ್ವರ ರಾಠೋಡ, ಆದಿತ್ಯ, ಕುಮಾರ ರಾಠೋಡ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.