ಬುಧವಾರ, ಮಾರ್ಚ್ 25, 2026

ನೀರು ಅಮೂಲ್ಯ: ವ್ಯರ್ಥ ಮಾಡದೇ ಸಂರಕ್ಷಿಸಿ: ತಹಸಿಲ್ದಾರ್

ಚಿತ್ತಾಪೂರ: ಇಂದಿನ ದಿನಗಳಲ್ಲಿ ನಾವು ನೀರನ್ನು ಅತಿಯಾಗಿ ಪೋಲು ಮಾಡುತ್ತಿದ್ದೇವೆ. ಮನುಷ್ಯ ಒಂದು ದಿನ ಊಟವಿಲ್ಲದೆ ಬದುಕಬಲ್ಲ, ಆದರೆ ನೀರಿಲ್ಲದೆ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಸಿ, ಮುಂದಿನ ಪೀಳಿಗೆಗಾಗಿ ಸಂರಕ್ಷಿಸಬೇಕು ಎಂದು ತಹಸೀಲ್ದಾರ್ ನಾಗಯ್ಯ ಹೀರೆಮಠ್ ಹೇಳಿದರು.

ಪಟ್ಟಣದ ಪುರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪುರಸಭೆ ಇವರ ಸಂಯುಕ್ತಾಶ್ರಯದಲ್ಲಿ 'ವಿಶ್ವ ಜಲ ದಿನಾಚರಣೆ' ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೇವಲ ನೀರು ಉಳಿಸುವುದು ಮಾತ್ರವಲ್ಲ, ನೀರು ಮಲಿನವಾಗದಂತೆ ನೋಡಿಕೊಳ್ಳುವುದು ಅಷ್ಟೇ ಮುಖ್ಯ. ಕಲುಷಿತ ನೀರನ್ನು ಸೇವಿಸುವುದರಿಂದ ಸಾಂಕ್ರಾಮಿಕ ರೋಗಗಳು ಹರಡಿ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಆರೋಗ್ಯವಂತ ಸಮಾಜಕ್ಕಾಗಿ ಶುದ್ಧ ನೀರಿನ ಬಳಕೆ ಅನಿವಾರ್ಯ" ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಿಶನ್ ಮಾಡಲಗಿ ಮಾತನಾಡಿ "ನೀರು ಪ್ರಕೃತಿ ನಮಗೆ ನೀಡಿದ ಉಡುಗೊರೆ. ಅಂತರ್ಜಲ ಮಟ್ಟ ಕುಸಿಯುತ್ತಿರುವ ಈ ಕಾಲದಲ್ಲಿ ಜಲಮೂಲಗಳ ರಕ್ಷಣೆ ಕಾನೂನಾತ್ಮಕವಾಗಿ ಮತ್ತು ನೈತಿಕವಾಗಿ ನಮ್ಮ ಜವಾಬ್ದಾರಿಯಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ಮತ್ತು ತಾಲೂಕಿನಾದ್ಯಂತ ಸಾರ್ವಜನಿಕರು ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು" ಎಂದು ಸಲಹೆ ನೀಡಿದರು.

ನ್ಯಾಯವಾದಿಗಳಾದ ಎ,ಎಂ ಅವಂಟಿ ರವರು ವಿಶ್ವಜಲ ದಿನಾಚರಣೆ ಕುರಿತು ಕಾನೂನು ಮಾಹಿತಿ ಬಗ್ಗೆ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಅಪ್ಪರ ಜಿಲ್ಲಾ ಸರ್ಕಾರಿ ವಕೀಲರಾದ ಶ್ರೀಮತಿ ವಿ ಆರ್ ಕಾಂತ, ಸಹಾಯಕ ಸರ್ಕಾರಿ ಅಭಿಯೋಜಕ ಶ್ರೀಮತಿ ಅಂಜನಾದೇವಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸೋಮಶೇಖರ ಕರದಳ್ಳಿ, ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಭಾರತಿ ದಂಡೋತಿ, ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು, ಪುರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಬಾಬು ಜಗಜೀವನ್ ರಾಮ್ ಜಯಂತಿ ಅಂಗವಾಗಿ ಪೂರ್ವಭಾವಿ ಸಭೆ.

ಚಿತ್ತಾಪುರ: ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ರವರ ಜಯಂತಿಯನ್ನು ಏಪ್ರಿಲ್ 5 ರಂದು ಅರ್ಥಪೂರ್ಣವಾಗಿ ಆಚರಿಸುವ ಕುರಿತು ಬುಧವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ಜರುಗಿತು.

​ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಜಯಂತಿಯ ಆಚರಣೆಯ ರೂಪುರೇಷೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಅಂದು ಬೆಳಿಗ್ಗೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮತ್ತು ಶಿಸ್ತುಬದ್ಧವಾಗಿ ಆಯೋಜಿಸಲು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಸಭೆಯಲ್ಲಿ ಗ್ರೇಡ್-2 ತಹಸೀಲ್ದಾರ್  ರಾಜಕುಮಾರ ಮರತೂರಕರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚೇತನ್ ಗುರಿಕರ್, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಪಂಡಿತ ಶಿಂದೆ, ದೈಹಿಕ ಶಿಕ್ಷಣಾಧಿಕಾರಿ ಶಿವಶರಣಪ್ಪ ಮಂಠಾಳೆ ಸೇರಿದಂತೆ ಪುರಸಭೆ, ಅಬಕಾರಿ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಮಾಜದ ಮುಖಂಡರಾದ ರಾಜಣ್ಣ ಕರದಾಳ, ಮಲ್ಲಿಕಾರ್ಜುನ್ ಕಾಳಗಿ, ಹಿರಿಯರಾದ ಮರೆಪ್ಪ ಸಂದೇನ್, ನಾಗೇಶ ಹಲಿಗಿ, ಸಾಬಣ್ಣ ಹಲಿಗಿ, ಶ್ರೀಕಾಂತ ಹೊಸಳ್ಳಿಕರ, ಶಿವರಾಜಕುಮಾರ ಬೊಮ್ಮನಗಳ್ಳಿಕರ, ವಿಶ್ವನಾಥ ಬೊಮ್ಮನಗಳ್ಳಿಕರ, ಮಹಾಂತೇಶ ಬೊಮ್ಮನಗಳ್ಳಿಕರ ಹಾಗೂ ರಮೇಶ ಕಟ್ಟಿಮನಿ ಸೇರಿದಂತೆ ಅನೇಕರು ಸಭೆಯಲ್ಲಿ ಪಾಲ್ಗೊಂಡು ಅಮೂಲ್ಯ ಸಲಹೆಗಳನ್ನು ನೀಡಿದರು.
​ಬಾಬು ಜಗಜೀವನ್ ರಾಮ್ ಅವರ ತತ್ವ ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಜಯಂತಿಯನ್ನು ಯಶಸ್ವಿಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸೋಮವಾರ, ಮಾರ್ಚ್ 23, 2026

ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕ್ರಮ ವಹಿಸಿ: ಪ್ರಭುರೆಡ್ಡಿ ಸೂಚನೆ.

ಚಿತ್ತಾಪುರ: ಮುಂಬರುವ ಬೇಸಿಗೆ ಮತ್ತು ಮುಂಗಾರು ಮಳೆಗಾಲದ ಆರಂಭದ ಅವಧಿಯಲ್ಲಿ ತಾಲೂಕಿನಾದ್ಯಂತ ಕುಡಿಯುವ ನೀರಿನ ಅಭಾವ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೇಡಂ ಸಹಾಯಕ ಆಯುಕ್ತರಾದ ಪ್ರಭುರೆಡ್ಡಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ 2026-27ನೇ ಸಾಲಿನ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳ ಮೇವು ನಿರ್ವಹಣೆ ಕುರಿತ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲೂಕಿನ ಯಾವುದೇ ಹಳ್ಳಿ ಅಥವಾ ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ತಕ್ಷಣವೇ ಪರ್ಯಾಯ ವ್ಯವಸ್ಥೆ ಮಾಡಬೇಕು. ಪೈಪ್‌ಲೈನ್ ದುರಸ್ತಿ ಅಥವಾ ಅಗತ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಸಿದ್ಧರಾಗಿರಬೇಕು, 

ಬೇಸಿಗೆಯ ಅವಧಿಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆಯಾಗದಂತೆ ನೋಡಿಕೊಳ್ಳುವುದು ಪಶುಸಂಗೋಪನಾ ಇಲಾಖೆ ಮತ್ತು ಗ್ರಾಮ ಪಂಚಾಯಿತಿಗಳ ಜವಾಬ್ದಾರಿಯಾಗಿದೆ. ಅಗತ್ಯವಿರುವ ಕಡೆಗಳಲ್ಲಿ ಮೇವು ಬ್ಯಾಂಕ್‌ಗಳನ್ನು ಸಕ್ರಿಯಗೊಳಿಸಬೇಕು. ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಸಾರ್ವಜನಿಕರ ಕುಂದುಕೊರತೆಗಳಿಗೆ ತಕ್ಷಣ ಸ್ಪಂದಿಸಬೇಕು.

ಮುಂಗಾರು ಮಳೆ ಆರಂಭವಾಗುವವರೆಗಿನ ಅವಧಿಯು ಅತ್ಯಂತ ನಿರ್ಣಾಯಕವಾಗಿದ್ದು, ಯಾವುದೇ ಹಂತದಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗಯ್ಯ ಹಿರೇಮಠ, ಗ್ರೇಡ್-2 ತಹಸೀಲ್ದಾರ ರಾಜಕುಮಾರ ಮರತೂರ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಆಕ್ರಂ ಪಾಶಾ, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಹಾಗೂ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ಉಪಸ್ಥಿತರಿದ್ದರು.

ಬಿಜೆಪಿ ಕಚೇರಿಯಲ್ಲಿ ಕ್ರಾಂತಿವೀರರ 'ಬಲಿದಾನ ದಿನ' ಆಚರಣೆ

ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್‌ ಸಿಂಗ್‌, ಸುಖದೇವ್‌ ಥಾಪರ್ ಹಾಗೂ ಶಿವರಾಮ್ ರಾಜಗುರು ಅವರ ಪುಣ್ಯತಿಥಿ ಪ್ರಯುಕ್ತ ‘ಬಲಿದಾನ ದಿನ’ವನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಕ್ರಾಂತಿವೀರರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ, "ದೇಶದ ಸ್ವಾತಂತ್ರ್ಯಕ್ಕಾಗಿ ಸ್ವಾಭಿಮಾನದಿಂದ ನಗುನಗುತ್ತಲೇ ಸಾವಿನ ಕುಣಿಕೆ ಏರಿದ ಕೆಚ್ಚೆದೆಯ ವೀರರಾದ ಭಗತ್‌‌ ಸಿಂಗ್‌‌, ರಾಜಗುರು ಹಾಗೂ ಸುಖದೇವ ಅವರು ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ಬ್ರಿಟಿಷರನ್ನು ನಮ್ಮ ದೇಶದಿಂದ ಓಡಿಸಲೇಬೇಕೆಂಬ ಛಲದಿಂದ ಅವರು ನಡೆಸಿದ ಕ್ರಾಂತಿಕಾರಿ ಹೋರಾಟ ಇಂದಿನ ಯುವಜನತೆಗೆ ಪ್ರೇರಣೆ" ಎಂದು ಬಣ್ಣಿಸಿದರು.

"1929ರಲ್ಲಿ ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿಯ ಮೇಲೆ ಬಾಂಬ್ ದಾಳಿ ಮಾಡಿದ ಕಾರಣಕ್ಕಾಗಿ ಅವರನ್ನು ಬಂಧಿಸಿ ಮರಣದಂಡನೆ ಶಿಕ್ಷೆ ವಿಧಿಸಲಾಯಿತು. 1931ರ ಈ ದಿನ ಭಾರತೀಯರ ಪಾಲಿಗೆ ಕರಾಳ ದಿನ. ದೇಶಕ್ಕಾಗಿ ನೇಣುಗಂಬವೇರಿದಾಗ ಸುಖದೇವ್‌ ಹಾಗೂ ಭಗತ್‌ ಸಿಂಗ್ ಅವರಿಗೆ ಕೇವಲ 23 ವರ್ಷ, ರಾಜಗುರು ಅವರಿಗೆ 22 ವರ್ಷ ವಯಸ್ಸಾಗಿತ್ತು. ಇಷ್ಟು ಸಣ್ಣ ವಯಸ್ಸಿನಲ್ಲಿಯೇ ತಾಯ್ನಾಡಿಗಾಗಿ ತಮ್ಮ ಉಸಿರು ಚೆಲ್ಲಿದ ಇಂತಹ ಮಹಾನ್ ಆದರ್ಶವಂತರ ನಾಡಿನಲ್ಲಿರುವ ನಾವು, ಅವರ ಆಶಯದಂತೆ ಭವ್ಯ ಭಾರತದ ‌ಹಿರಿಮೆಯನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು" ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಯುವ ಮುಖಂಡ ವಿಠಲ ನಾಯಕ, ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಪ್ರಮುಖರಾದ ಶರಣಗೌಡ ಚಾಮನೂರ, ಹರಿ ಗಲಾಂಡೆ, ಕಿಶನ ಜಾಧವ, ಚಂದ್ರಶೇಖರ ಬೆಣ್ಣೂರ, ಯಂಕಮ್ಮ ಗೌಡಗಾಂವ, ನಿರ್ಮಲಾ ಇಂಡಿ, ಉಮಾಭಾಯಿ ಗೌಳಿ, ದೇವಕ್ಕಿ ಪೂಜಾರಿ, ಬಸವರಾಜ ಇಂಗಳಗಿ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ತಿರಸ್ಕರಿಸಲು ಆಗ್ರಹ: ಮಾ.24ರಂದು 'ಬೆಂಗಳೂರು ಚಲೋ' ಬೃಹತ್ ಪ್ರತಿಭಟನೆ.

ಚಿತ್ತಾಪುರ: ಒಳಮೀಸಲಾತಿ ಕುರಿತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ತಕ್ಷಣವೇ ತಿರಸ್ಕರಿಸುವಂತೆ ಆಗ್ರಹಿಸಿ ಹಾಗೂ ಹಳೆಯ ಮೀಸಲಾತಿ ನಿಯಮದಂತೆಯೇ ತ್ವರಿತ ನೇಮಕಾತಿ ನಡೆಸುವಂತೆ ಒತ್ತಾಯಿಸಿ, ಮಾರ್ಚ್ 24ರಂದು (ಮಂಗಳವಾರ) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 'ಬೆಂಗಳೂರು ಚಲೋ' ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ (ರಿ) ಹಾಗೂ ಬಂಜಾರ, ಭೋವಿ, ಕೊರಚ, ಕೊರಮ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆಯಲಿರುವ ಈ ಹೋರಾಟದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಡಿ. ಚವ್ಹಾಣ, "ನಾಗಮೋಹನ್ ದಾಸ್ ಆಯೋಗದ ವರದಿಯು ಸಂಪೂರ್ಣ ಅವೈಜ್ಞಾನಿಕವಾಗಿದೆ. ಯಾವುದೇ ಸಮಗ್ರ ಸಮೀಕ್ಷೆಯಿಲ್ಲದೆ ಈ ವರದಿಯನ್ನು ಸಿದ್ಧಪಡಿಸಲಾಗಿದ್ದು, ಒಳ ಮೀಸಲಾತಿ ರೋಸ್ಟರ್ ಹಂಚಿಕೆಯನ್ನು ನಮ್ಮ ಸಮುದಾಯಗಳು ತೀವ್ರವಾಗಿ ವಿರೋಧಿಸುತ್ತವೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಮಾರ್ಚ್ 24ರಂದು ನಡೆಯುವ ಈ ಹೋರಾಟವು ಭೋವಿ, ಬಂಜಾರ, ಕೊರಮ, ಕೊರಚ, ಛಲವಾದಿ, ಚರ್ಮಕಾರ ಸೇರಿದಂತೆ ವಿವಿಧ ಸೂಕ್ಷ್ಮ ಜಾತಿಗಳ ಅಸ್ತಿತ್ವದ ಪ್ರಶ್ನೆಯಾಗಿದೆ. ಸಮುದಾಯದ ಸಂತ ಮಹಾತ್ಮರ ನೇತೃತ್ವದಲ್ಲಿ ನಡೆಯಲಿರುವ ಈ ಬೃಹತ್ ಪ್ರತಿಭಟನೆಯಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶ ಹೊಂದಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ಚಿತ್ತಾಪುರ ತಾಲೂಕು ಮತ್ತು ಸುತ್ತಮುತ್ತಲಿನ ಭಾಗಗಳಿಂದಲೇ ಸುಮಾರು 5000ಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ. ಸಮುದಾಯದ ಪ್ರತಿಯೊಬ್ಬರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅನ್ಯಾಯದ ವಿರುದ್ಧ ಧ್ವನಿಯೆತ್ತಬೇಕು" ಎಂದು ಅವರು ಕರೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಮಹೇಶ್ ಕಾಶಿ, ಪ್ರಮುಖರಾದ ಗೋಪಾಲ ಡಿ. ರಾಠೋಡ್, ವಿಠ್ಠಲ್ ಕಟೀಮನಿ, ಮರಿಯಪ್ಪ ಭಜಂತ್ರಿ, ಪ್ರವೀಣ್ ಪವಾರ್, ದೇವಿದಾಶ್ ಚವ್ಹಾಣ, ಶ್ರೀಕಾಂತ್ ರಾಠೋಡ್, ವಿಜಯ ಪವಾರ್, ಮಹದೇವ ಭಜಂತ್ರಿ, ದೀಪಕ್ ಜಾಧವ್ ಹಾಗೂ ಜಗದೀಶ್ ಪವಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶುಕ್ರವಾರ, ಮಾರ್ಚ್ 20, 2026

ರಾವೂರ್‌ನಲ್ಲಿ ಸೌಹಾರ್ದತೆಯ ಇಫ್ತಿಯಾರ್ ಕೂಟ: ಭಾವೈಕ್ಯತೆಯ ಸಂದೇಶ ಸಾರಿದ ಗ್ರಾಮಸ್ಥರು

ರಾವೂರ್: ತಾಲೂಕಿನ ರಾವೂರ್ ಗ್ರಾಮದ ಮಕ್ಕಾ ಮಜೀದ್‌ನಲ್ಲಿ ಈರಣ್ಣ ಗೌಡಾ ಯರಗಲ್ ಮತ್ತು ಗುರುಶಾಂತಲಿಂಗ್ ಆಗ್ರು ಅವರ ನೇತೃತ್ವದಲ್ಲಿ ಇತ್ತೀಚೆಗೆ ಸೌಹಾರ್ದತೆಯ ಇಫ್ತಿಯಾರ್ ಪಾರ್ಟಿಯನ್ನು ಅತ್ಯಂತ ಸಂಭ್ರಮದಿಂದ ಆಯೋಜಿಸಲಾಗಿತ್ತು.

​ಪವಿತ್ರ ರಂಜಾನ್ ಮಾಸದ ಅಂಗವಾಗಿ ಆಯೋಜಿಸಲಾಗಿದ್ದ ಈ ಕೂಟದಲ್ಲಿ ವಿವಿಧ ಸಮುದಾಯದ ಮುಖಂಡರು, ಗಣ್ಯರು ಹಾಗೂ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು. ಸೂರ್ಯಾಸ್ತದ ನಂತರ ಎಲ್ಲರೂ ಒಂದೇ ಪಂಕ್ತಿಯಲ್ಲಿ ಕುಳಿತು ಉಪವಾಸ ಮುರಿದು ಇಫ್ತಿಯಾರ್ ಸೇವಿಸಿದ್ದು, ಗ್ರಾಮದ ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆಗೆ ಸಾಕ್ಷಿಯಾಯಿತು.

ಭಾವೈಕ್ಯತೆಯ ಸಂದೇಶ:

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, "ನಮ್ಮ ಗ್ರಾಮದಲ್ಲಿ ನಾವು ಮೊದಲಿನಿಂದಲೂ ಅಣ್ಣ-ತಮ್ಮಂದಿರಂತೆ ಬದುಕುತ್ತಾ ಬಂದಿದ್ದೇವೆ. ಧರ್ಮ ಯಾವುದಾದರೂ ಮನುಷ್ಯತ್ವ ಒಂದೇ ಎಂಬ ಸಂದೇಶವನ್ನು ಇಂದಿನ ಈ ಕಾರ್ಯಕ್ರಮ ಸಾರುತ್ತಿದೆ. ಇದೇ ರೀತಿಯ ಒಗ್ಗಟ್ಟು ಮತ್ತು ಪ್ರೀತಿ ಮುಂದಿನ ದಿನಗಳಲ್ಲೂ ಮುಂದುವರಿಯಲಿ" ಎಂದು ಆಶಿಸಿದರು. ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡ ಗ್ರಾಮಸ್ಥರು ಸೌಹಾರ್ದತೆಯನ್ನು ಮೆರೆದರು.

​ಇದೇ ವೇಳೆ ಗ್ರಾಮದ ಪ್ರಮುಖರಿಗೆ ಸನ್ಮಾನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು:

ಈ ಸೌಹಾರ್ದ ಕೂಟದಲ್ಲಿ ಕಾಂಗ್ರೆಸ್ ಮುಖಂಡರಾದ ಗುರುನಾಥ್ ಗುದ್ಗಲ್, ತಿಪ್ಪಣ್ಣ ವಗ್ಗರ್, ಮೋಹನ್ ಸುರೇ ಹಾಗೂ ವಕೀಲರಾದ ಬಸವರಾಜ್ ಮಾಕಾ ಪಾಲ್ಗೊಂಡಿದ್ದರು. ಅಲ್ಲದೆ ಪಂಡಿತ್ ಮುತಗಿ, ಗುರುಶಾಂತಲಿಂಗ್ ಕಿರಣಾ ಅಂಗಡಿ, ಗುರುಶಾಂತ್ ಈರಣ್ಣ ಗೌಡಾ, ಗುರುಶಾಂತಲಿಂಗ್ ಆಗ್ರು ರಾವೂರ್, ಗುರುನಾಥ ಬಿಲ್ವಾರ್ ಮತ್ತು ಇಮಾಮ್ ಸಾಬ್ ಮುಸಾವಾಲೆ ಉಪಸ್ಥಿತರಿದ್ದರು.

​ಮಕ್ಕಾ ಮಜೀದ್ ಕಮಿಟಿ ಅಧ್ಯಕ್ಷರಾದ ಹಾಜಿಲಾಲ್ ಮುಸವಾಲೇ, ಬಂದಗಿಸಬ ಮದರಾ, ಮಶಾಕ್ ಸಾಬ್ ಸರಡಗಿ, ಅಲಹಜ್ ಜಾಫರಮೀಯಾ ಕರ್ನೂಲ್, ಹಾಜಿಕರಿಮ್ ಮೌಲಾನ, ಹಸನಪಟೇಲ್ ಮುಸ್ತೂರ್, ಅಲೀಷೇರ್ ದಂಡುತಿ ಸೇರಿದಂತೆ ಅನೇಕ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ: ಸಾಹೇಬಪಟೇಲ್ ಎಂ ಹಸರಗುಂಡಗಿ

ವರುಣನಗರದಲ್ಲಿ ಶರಣರ ಸಂಭ್ರಮ: ಏಪ್ರಿಲ್ 7ಕ್ಕೆ ಶ್ರೀ ಶರಣಬಸವೇಶ್ವರ ಭವ್ಯ ರಥೋತ್ಸವ.

ಚಿತ್ತಾಪುರ: ಇಲ್ಲಿನ ವರುಣನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜಾತ್ರಾ ಮಹೋತ್ಸವದ ಕಳೆಗಟ್ಟಿದ್ದು, ರಥ ಪೂಜೆ ಹಾಗೂ ನೂತನ ದೀಪಸ್ತಂಭ ಉದ್ಘಾಟನೆಯೊಂದಿಗೆ ಪೂರ್ವಭಾವಿ ಸಭೆ ಅತ್ಯಂತ ಭಕ್ತಿಪೂರ್ವಕವಾಗಿ ಜರುಗಿತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಶ್ರೀ ಶರಣಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಸೇವಾ ಟ್ರಸ್ಟ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

​ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಅಂಬರೀಶ್ ಸುಲೆಗಾಂವ್, "ಕಲಬುರ್ಗಿಯ ಶರಣಬಸವೇಶ್ವರ ಜಾತ್ರೆಯಷ್ಟೇ ಪವಿತ್ರವಾದ ಇತಿಹಾಸ ನಮ್ಮ ವರುಣನಗರದ ಜಾತ್ರೆಗೂ ಇದೆ. ಹಿಂದೆ ಅನೇಕ ಅಡೆತಡೆಗಳ ನಡುವೆಯೂ ಈ ಪರಂಪರೆಯನ್ನು ಉಳಿಸಿಕೊಂಡು ಬರಲಾಗಿದೆ. ಇಂದು ಶರಣರ ಕೃಪೆ ಹಾಗೂ ಭಕ್ತರ ಮತ್ತು ದಾನಿಗಳ ಉದಾರ ಮನಸ್ಸಿನಿಂದ ಕಳೆದ ಕೆಲವು ವರ್ಷಗಳಿಂದ ಈ ಜಾತ್ರೆಯು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿರುವುದು ಸಂತಸದ ವಿಷಯ," ಎಂದರು.

​ಜಾತ್ರಾ ಮಹೋತ್ಸವದ ಅಂಗವಾಗಿ ಈ ಕೆಳಗಿನ ವಿಶೇಷ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ:
​ವಿಶ್ವವಂದ್ಯರ ಪುರಾಣ: ಮಾರ್ಚ್ 26 ರಿಂದ ಏಪ್ರಿಲ್ 6ರ ವರೆಗೆ ಪ್ರತಿದಿನ ಸಂಜೆ 7:30ಕ್ಕೆ ಅಬ್ಬೆ ತುಮಕೂರ ಸದ್ಗುರು ಶ್ರೀ ವಿಶ್ವಾರಾಧ್ಯರ ಪುರಾಣ ಪ್ರವಚನ ನಡೆಯಲಿದೆ.
​ನಾಣ್ಯಗಳ ತುಲಾಭಾರ: ಷ.ಬ್ರ ಶ್ರೀ ಶಿವಶಂಕರ ಶಿವಾಚಾರ್ಯರ ಪಟ್ಟಾಧಿಕಾರದ ಸುವರ್ಣ ಮಹೋತ್ಸವದ ನಿಮಿತ್ತ ಅವರಿಗೆ ನಾಣ್ಯಗಳ ಮೂಲಕ ಭಕ್ತಿಪೂರ್ವಕ ತುಲಾಭಾರ ನೆರವೇರಲಿದೆ.
​ಮಹಾ ರಥೋತ್ಸವ: ಏಪ್ರಿಲ್ 7 ರಂದು ಸಾಯಂಕಾಲ 6:30ಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಶರಣಬಸವೇಶ್ವರರ ಭವ್ಯ ರಥೋತ್ಸವ ಜರುಗಲಿದೆ.
ದೀಪಸ್ತಂಭ ಉದ್ಘಾಟಿಸಿ ಆಶೀರ್ವಚನ ನೀಡಿದ ಪೂಜ್ಯ ಶ್ರೀ ಕಂಬಳೇಶ್ವರ ಮಠದ ಶ್ರೀಗಳಗಾದ ಸೋಮಶೇಖರ ಶಿವಾಚಾರ್ಯರು, "ವರುಣನಗರದಲ್ಲಿ ಶರಣಬಸವೇಶ್ವರ ದೇವಸ್ಥಾನವು ಇಂದು ಈ ಮಟ್ಟಕ್ಕೆ ಅಭಿವೃದ್ಧಿ ಹೊಂದಲು ಯುವ ಪೀಳಿಗೆಯ ಶ್ರಮವೇ ಕಾರಣ. ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಒಂದಾಗಿ ನಡೆಸುತ್ತಿರುವ ಈ ಧಾರ್ಮಿಕ ಕಾರ್ಯಗಳು ಸಮಾಜಕ್ಕೆ ಮಾದರಿ," ಎಂದು ಹಾರೈಸಿದರು.

​ಸಭೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ನಾಗರಾಜ ಭಂಕಲಗಿ, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವಿಜಯಕುಮಾರ್ ದೇಶಮುಖ್, 2026ನೇ ಸಾಲಿನ ಜಾತ್ರಾ ಮಹೋತ್ಸವ ಅಧ್ಯಕ್ಷ ಅಶೋಕ್ ನಿಪ್ಪಾಣಿ ಸೇರಿದಂತೆ ಪ್ರಮುಖರಾದ ಆನಂದ ಪಾಟೀಲ ನರಬೂಳಿ, ಶ್ರೀಮತಿ ರಾಜೇಶ್ವರಿ ಪಾಟೀಲ್, ಶ್ರೀಮತಿ ಗಿರೀಜಾ ಪಾಟೀಲ್ ಹೆಬ್ಬಾಳ, ಶ್ರೀಮತಿ ಪ್ರಭಾ ಬೆಂಗಳೂರು, ಅನಿಲ್ ವಡ್ಡಡಗಿ, ಮಲರೆಡ್ಡಿ ಗೋಪಸೇನ್, ಜಗಣ್ಣಗೌಡ ಪಾಟೀಲ್, ಕೋಟೇಶ್ವರ ರೇಷ್ಮಿ ಹಾಗೂ ಪ್ರಸಾದ ಅವಂಟಿ, ಶ್ರಿಮಂತ ಕುಂಬಾರ, ಸೇರಿದಂತೆ ಇತರರು ಉಪಸ್ಥಿತರಿದ್ದರು.​ಕಾರ್ಯಕ್ರಮವನ್ನು ಬಸವರಾಜ ಹೋಟಿ ಅಚ್ಚುಕಟ್ಟಾಗಿ ನಿರೂಪಿಸಿದರೆ, ವಿಶ್ವಾರಾಧ್ಯ ಪಾಟೀಲ್ ವಂದನಾರ್ಪಣೆ ಮಾಡಿದರು.

ಮೀಸಲಾತಿ ವರದಿ ಕೈಬಿಡಲು ಮರೆಪ್ಪ ಹಳ್ಳಿ ಒತ್ತಾಯ.

ಚಿತ್ತಾಪುರ: ಒಳಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ನಾಗಮೋಹನ್ ದಾಸ್ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ರಾಜ್ಯ ಸರ್ಕಾರ ಕೂಡಲೇ ಈ ವರದಿಯನ್ನು ತಿರಸ್ಕರಿ ಮೀಸಲಾತಿ ವರದಿ ಕೈಬಿಡಬೇಕು ಎಂದು ಆಗ್ರಹಿಸಿ ಮಾರ್ಚ್ 25ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ಮರೆಪ್ಪ ಹಳ್ಳಿ ತಿಳಿಸಿದರು.

​ಪಟ್ಟಣದ ಬುದ್ಧ ವಿಹಾರದಲ್ಲಿ 'ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟ'ದ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ​ಒಳಮೀಸಲಾತಿ ಕುರಿತಂತೆ ನಾಗಮೋಹನ್ ದಾಸ್ ಆಯೋಗ ನೀಡಿರುವ ವರದಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು "ಈ ವರದಿಯು ಯಾವುದೇ ನಿಖರವಾದ ಹಾಗೂ ವೈಜ್ಞಾನಿಕ ಸಮೀಕ್ಷೆಯ ಆಧಾರದ ಮೇಲೆ ಸಿದ್ಧವಾಗಿಲ್ಲ. ಪರಿಶಿಷ್ಟ ಜಾತಿಯಲ್ಲಿರುವ ಸಮಗ್ರ ಉಪಜಾತಿಗಳ ನಿಖರ ಜನಸಂಖ್ಯೆ, ಅವರ ಪ್ರಸ್ತುತ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಸರಿಯಾಗಿ ಅಧ್ಯಯನ ಮಾಡದೆ, ಕೇವಲ ಮೇಲ್ನೋಟದ ಅಂಕಿ-ಅಂಶಗಳ ಆಧಾರದ ಮೇಲೆ ವರದಿ ನೀಡಲಾಗಿದೆ. ಇದರಿಂದ ಬಲಗೈ ಸಮುದಾಯಗಳಿಗೆ ಹಾಗೂ ಅತ್ಯಂತ ಹಿಂದುಳಿದ ಅಲೆಮಾರಿ ಉಪಜಾತಿಗಳಿಗೆ ತೀವ್ರ ಅನ್ಯಾಯವಾಗಲಿದೆ. ಸಮುದಾಯಗಳ ನಡುವೆ ಕಂದಕ ಸೃಷ್ಟಿಸುವ ಇಂತಹ ದೋಷಪೂರಿತ ಹಾಗೂ ಅವೈಜ್ಞಾನಿಕ ವರದಿಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಬಾರದು" ಎಂದು ವಿಸ್ತೃತವಾಗಿ ವಿವರಿಸಿದರು.

ಸರ್ಕಾರದ ಕಣ್ಣು ತೆರೆಸುವ ನಿಟ್ಟಿನಲ್ಲಿ ಹಾಗೂ ಈ ಅವೈಜ್ಞಾನಿಕ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸುವಂತೆ ಒತ್ತಾಯಿಸಿ, 'ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟ'ದ ನೇತೃತ್ವದಲ್ಲಿ ದಿನಾಂಕ: 25-03-2026 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಲಾಗಿದೆ.

"ನಮ್ಮ ಸಮುದಾಯದ ಅಳಿವು-ಉಳಿವಿನ ಪ್ರಶ್ನೆಯಾಗಿರುವ ಈ ಹೋರಾಟಕ್ಕೆ ಪ್ರತಿಯೊಬ್ಬರ ಬೆಂಬಲ ಅಗತ್ಯವಿದೆ. ಚಿತ್ತಾಪುರ ತಾಲೂಕು ಸೇರಿದಂತೆ ಜಿಲ್ಲೆಯ ಮೂಲೆ-ಮೂಲೆಗಳಿಂದ ಸಮುದಾಯದ ಮುಖಂಡರು, ಯುವಕರು, ಮಹಿಳೆಯರು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಹೋರಾಟವನ್ನು ಯಶಸ್ವಿಗೊಳಿಸಬೇಕು" ಎಂದು ಕಳಕಳಿಯ ಮನವಿ ಮಾಡಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಸುನಿಲ್ ದೊಡ್ಡಮನಿ, ಶಿವರುದ್ರ ಬೇಣಿ, ಮಲ್ಲಪ್ಪ ಹೂಸಮನಿ, ಮಲ್ಲಿಕಾರ್ಜುನ ಬೆಣ್ಣೂರಕರ್, ಸುರೇಶ್ ಮೆಂಗನ್, ಸಾಯಬಣ ಬನಹಟಿ, ಶರಣಬಸು ಶಿರೂಳಕರ್, ದೇವಿಂದ್ರ ಕುಮಸಿ, ಹರಳಯ್ಯ ಬಡಿಗೇರ್, ಶಿವಮೂರ್ತಿ ಪಾಮನೂರ, ಸೂರ್ಯಕಾಂತ ರದ್ದೇವಾಡಿ, ಶರಣು ನಾಟೀಕಾರ್, ನಾಗೆಂದ್ರ ಬುರ್ಲಿ, ಮಲ್ಲಿಕಾರ್ಜುನ ಮುಡಬೂಳಕರ್, ಜಗನ್ನಾಥ ಮುಡಬೂಳಕರ್, ಸೇರಿದಂತೆ ಇತರರು ಇದ್ದರು.

ಬುಧವಾರ, ಮಾರ್ಚ್ 18, 2026

ಭಾರೀ ಮಳೆ, ಗುಡುಗು-ಮಿಂಚಿನ ಆರ್ಭಟ: ಜನಜೀವನ ಅಸ್ತವ್ಯಸ್ತ, ಓರಿಯಂಟ್ ಸಿಮೆಂಟ್ ಕಾರ್ಖಾನೆಗೆ ಹಾನಿ.

​ಚಿತ್ರಾಪುರ: ಪಟ್ಟಣ ಸೇರಿ ನಿನ್ನೆ ರಾತ್ರಿ  ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ, ಗುಡುಗು ಮತ್ತು ಮಿಂಚು ಸಹಿತ ವರುಣನ ಆರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹವಾಮಾನದಲ್ಲಿನ ಈ ದಿಢೀರ್ ಮತ್ತು ತೀವ್ರ ಬದಲಾವಣೆಯಿಂದಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾನಿಯಾಗಿದ್ದು, ಸ್ಥಳೀಯ ಮೂಲಸೌಕರ್ಯ ಮತ್ತು ದೈನಂದಿನ ಚಟುವಟಿಕೆಗಳಿಗೆ ವ್ಯತ್ಯಯ ಉಂಟಾಗಿದೆ.

ಈ ಅಕಾಲಿಕ ಬಿರುಗಾಳಿ ಮತ್ತು ಮಳೆಯಿಂದಾಗಿ ಇಲ್ಲಿನ ಓರಿಯಂಟ್ ಸಿಮೆಂಟ್ ಕಾರ್ಖಾನೆಯ ಮೇಲೂ ಗಂಭೀರ ಪರಿಣಾಮ ಬೀರಿದೆ. ಕಾರ್ಖಾನೆಯ ಆವರಣದಲ್ಲಿರುವ ಕೆಲವು ಸಹಾಯಕ ಸೌಕರ್ಯಗಳಿಗೆ ಹಾನಿಯಾಗಿದ್ದು, ದೈನಂದಿನ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ. ನಿರಂತರ ಮಳೆಯಿಂದಾಗಿ ಕಾರ್ಖಾನೆ ಆವರಣದಲ್ಲಿ ನೀರು ನಿಂತು ಜಲಾವೃತಗೊಂಡಿದ್ದು, ಬಿರುಗಾಳಿಯ ಅಬ್ಬರಕ್ಕೆ ಕಾರ್ಯನಿರ್ವಹಣೆಯಲ್ಲಿ ಭಾರೀ ಸವಾಲುಗಳು ಎದುರಾಗಿವೆ.
ಬಿರುಗಾಳಿಯ ರಭಸಕ್ಕೆ ವಿದ್ಯುತ್ ಕಂಬಗಳು ಹಾನಿಗೀಡಾಗಿದ್ದು, ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ, ಕೃಷಿ ಜಮೀನುಗಳು ಮಳೆಗೆ ಸಿಲುಕಿ ಹಾನಿಗೊಳಗಾಗಿವೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

"ಅದೃಷ್ಟವಶಾತ್ ಈ ಪ್ರಕೃತಿ ವಿಕೋಪದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ. ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ಆದಷ್ಟು ಬೇಗ ಸಹಜ ಸ್ಥಿತಿಗೆ ತರಲು ಪುನರ್‌ಸ್ಥಾಪನಾ ಕಾರ್ಯಗಳು ಭರದಿಂದ ಸಾಗುತ್ತಿವೆ," ಎಂದು ಅದಾನಿ ಸಿಮೆಂಟ್‌ನ ಮುಖ್ಯ ಕಾರ್ಖಾನೆ ವ್ಯವಸ್ಥಾಪಕರಾದ ಅಜಯ್ ಶರ್ಮಾ ಅವರು ಮಾಹಿತಿ ನೀಡಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಸ್ವಂತ ಖರ್ಚಿನಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಿದ ಎಸ್‌ಡಿಎಂಸಿ ಅಧ್ಯಕ್ಷ

ಚಿತ್ತಾಪುರ: ಮಾರ್ಚ್,18 ಇಂದಿನಿಂದ ಎಸ್.ಎಸ್.ಎಲ್.ಸಿ (SSLC) ಪರೀಕ್ಷೆಗಳು ಆರಂಭವಾಗಿದ್ದು, ಪರೀಕ್ಷೆ ಬರೆಯಲು ಚಿತ್ತಾಪುರ ಕೇಂದ್ರಕ್ಕೆ ತೆರಳುವ ಭಾಗೋಡಿ ಗ್ರಾಮದ ಶಾಲಾ ವಿದ್ಯಾರ್ಥಿಗಳಿಗೆ, ಶಾಲೆಯ ಎಸ್.ಡಿ.ಎಂ.ಸಿ (SDMC) ಅಧ್ಯಕ್ಷರಾದ ದೇವಿಂದ್ರ ಡೋಣಗಾಂವ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಉಚಿತ ಹಾಗೂ ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಮಾದರಿಯಾಗಿದ್ದಾರೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕೆ ಸರಿಯಾಗಿ ತೆರಳಲು ಯಾವುದೇ ರೀತಿಯ ಸಾರಿಗೆ ತೊಂದರೆಯಾಗಬಾರದು ಮತ್ತು ಮಕ್ಕಳು ಸುರಕ್ಷಿತವಾಗಿ ಹೋಗಿ ಬರಬೇಕು ಎಂಬ ಸದುದ್ದೇಶದಿಂದ, ಖಾಸಗಿ ಕ್ರಷರ್ ವಾಹನದ ಅನುಕೂಲ ಮಾಡಿಕೊಟ್ಟಿದ್ದಾರೆ. ಇವರ ಈ ವಿದ್ಯಾರ್ಥಿಪರ ಕಾರ್ಯಕ್ಕೆ ಗ್ರಾಮಸ್ಥರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಗಣ್ಯರ ಶುಭ ಹಾರೈಕೆ:
ಪರೀಕ್ಷೆಗೆ ತೆರಳುವ ಮುನ್ನ ವಿದ್ಯಾರ್ಥಿಗಳನ್ನು ಹುರಿದುಂಬಿಸಲು ಊರಿನ ಗಣ್ಯರು ಉಪಸ್ಥಿತರಿದ್ದರು. ರಾಯಚೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಡಾ. ಮಹಾಂತಗೌಡ ಪಾಟೀಲ್ ಹಾಗೂ ಚಿತ್ತಾಪುರ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶರಣಗೌಡ ಪಾಟೀಲ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಶುಭಕೋರಿದರು.

ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ರಾಜೇಂದ್ರಪ್ಪ ಆರಣಕಲ್, ಶರಣಬಸಪ್ಪ ಬೆಂಕಿ, ದೇವಿಂದ್ರ ನಾಟಿಕಾರ್, ರಮೇಶ್ ನೀಲಕಂಠ, ಮಲ್ಲಿಕಾರ್ಜುನ್ ಏರಿ, ಮಹಾಂತಪ್ಪ ಹಾಸಬಾ ಸೇರಿದಂತೆ ಹಲವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಎದುರಿಸಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಲಿ ಎಂದು ಹಾರೈಸಿದರು.

ಭಾನುವಾರ, ಮಾರ್ಚ್ 15, 2026

ಬಿಸಿಲ ನಾಡಿನ 'ಮಲೆನಾಡು' ಚಿಂಚೋಳಿ ಅಭಯಾರಣ್ಯಕ್ಕೆ ಹೈಟೆಕ್ ಸ್ಪರ್ಶ: ಪ್ರವಾಸೋದ್ಯಮಕ್ಕೆ ಹೊಸ ಕಳೆ!

ಕಲಬುರಗಿ: ಕಲ್ಯಾಣ ಕರ್ನಾಟಕದ ಹೆಮ್ಮೆಯ ನೈಸರ್ಗಿಕ ತಾಣ, ಬಿಸಿಲ ನಾಡಿನ ಮಲೆನಾಡು ಎಂದೇ ಖ್ಯಾತಿಯಾಗಿರುವ ಚಿಂಚೋಳಿ ವನ್ಯಜೀವಿ ಅಭಯಾರಣ್ಯದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಪರಿಸರ ಪ್ರವಾಸೋದ್ಯಮವನ್ನು ಬಲಪಡಿಸುವ ಮೂಲಕ ಸ್ಥಳೀಯ ಆರ್ಥಿಕತೆಗೆ ಚೈತನ್ಯ ನೀಡುವ ನಿಟ್ಟಿನಲ್ಲಿ ಸರ್ಕಾರವು ಕೆಕೆಆರ್ ಡಿಬಿ (KKRDB) ಅನುದಾನದಲ್ಲಿ ಬೃಹತ್ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಚಿತ್ತಾಪೂರ ಕ್ಷೇತ್ರದ ಶಾಸಕರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

​ನಿಸರ್ಗ ಪ್ರಿಯರಿಗೆ ಹಬ್ಬದೂಟ: ಹೊಸ ಸೌಲಭ್ಯಗಳು
​ಚಿಂಚೋಳಿ ಅಭಯಾರಣ್ಯದ ನೈಸರ್ಗಿಕ ಸೊಬಗನ್ನು ಸವಿಯಲು ಪ್ರವಾಸಿಗರಿಗೆ ಅನುಕೂಲವಾಗುವಂತೆ ಈ ಕೆಳಗಿನ ಸೌಲಭ್ಯಗಳನ್ನು ಲೋಕಾರ್ಪಣೆ ಮಾಡಲಾಗಿದೆ:
​ಜೀಪ್ ಸಫಾರಿ ಆರಂಭ: 24 ಲಕ್ಷ ರೂ. ವೆಚ್ಚದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಎರಡು ಕ್ಯಾಂಪರ್ ಸಫಾರಿ ವಾಹನಗಳನ್ನು ಪರಿಚಯಿಸಲಾಗಿದೆ. ಚಿರತೆ, ಕಾಡು ನಾಯಿ, ನೀಲಗಾಯ್ ಹಾಗೂ ಕೃಷ್ಣಮೃಗಗಳ ದರ್ಶನ ಪಡೆಯಲು ಇದು ಸಹಕಾರಿಯಾಗಲಿದೆ.
ಸುಸಜ್ಜಿತ ಸಫಾರಿ ರಸ್ತೆ: 64 ಲಕ್ಷ ರೂ. ವೆಚ್ಚದಲ್ಲಿ ಎಲ್ಲಾ ಹವಾಮಾನಕ್ಕೂ ಒಗ್ಗುವಂತಹ ಸಫಾರಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಪ್ರತಿದಿನ 6 ಟ್ರಿಪ್‌ಗಳ ಸಫಾರಿ ನಡೆಸಲು ವ್ಯವಸ್ಥೆ ಮಾಡಲಾಗಿದೆ.

​ಜಲಕ್ರೀಡೆಗಳ ಮಜಾ: ಚಂದ್ರಂಪಳ್ಳಿ ಅಣೆಕಟ್ಟಿನ ಹಿನ್ನೀರಿನಲ್ಲಿ 14 ಲಕ್ಷ ರೂ. ವೆಚ್ಚದಲ್ಲಿ 12 ಆಸನಗಳ ಮೋಟಾರ್ ಬೋಟ್, ಪೆಡಲ್ ಬೋಟ್ ಹಾಗೂ ಕಯಾಕಿಂಗ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

​ವಸತಿ ಸೌಕರ್ಯ: 43 ಲಕ್ಷ ರೂ. ವೆಚ್ಚದಲ್ಲಿ ಗೊಟ್ಟಂಗೊಟ್ಟದಲ್ಲಿ ಎರಡು ಹೊಸ ಟೆಂಟ್ ಹೌಸ್‌ಗಳನ್ನು ನಿರ್ಮಿಸಲಾಗಿದೆ. ಈ ಮೂಲಕ ಚಂದ್ರಂಪಳ್ಳಿಯ ಮರದ ಕುಟೀರಗಳ ಜೊತೆಗೆ ಪ್ರವಾಸಿಗರಿಗೆ ಅರಣ್ಯದ ನಡುವೆ ವಾಸ್ತವ್ಯ ಹೂಡುವ ಅವಕಾಶ ಸಿಗಲಿದೆ.
​ಸ್ಥಳೀಯರಿಗೆ ಉದ್ಯೋಗದ ಆಸೆ
​ಕೆಕೆಆರ್ ಡಿಬಿಯ ಮ್ಯಾಕ್ರೋ ಅನುದಾನದಡಿ ಒಟ್ಟು ₹2 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಈ ಯೋಜನೆಗಳು ಕೇವಲ ಪ್ರವಾಸೋದ್ಯಮಕ್ಕೆ ಮಾತ್ರ ಸೀಮಿತವಾಗಿಲ್ಲ. ಕಳೆದ ವರ್ಷ ಯಶಸ್ವಿಯಾದ 'ನೇಚರ್ ಟ್ರೆಕ್' ಕಾರ್ಯಕ್ರಮದಂತೆ, ಈ ಹೊಸ ಯೋಜನೆಗಳು ಕೂಡ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲಿವೆ. ಇದರಿಂದ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಹೆಚ್ಚಲಿದ್ದು, ಈ ಭಾಗದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಲಾಗಿದೆ.

​"ಚಿಂಚೋಳಿ ಅಭಯಾರಣ್ಯವು ಪರಿಸರ ಸಮತೋಲನ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇಲ್ಲಿನ ಚಂದ್ರಂಪಳ್ಳಿ ಅಣೆಕಟ್ಟು ಮತ್ತು ಮಾಣಿಕ್‌ಪುರ ಜಲಪಾತದ ರಮಣೀಯತೆಗೆ ಈಗ ಆಧುನಿಕ ಸೌಲಭ್ಯಗಳ ಸಾರಥ್ಯ ಸಿಕ್ಕಂತಾಗಿದೆ."

ಪಿಂಚಣಿ ಕಾಯ್ದೆ 2025 ರದ್ದತಿಗೆ ಆಗ್ರಹಿಸಿ ಪ್ರಧಾನಿಗೆ ಮನವಿ.

ಚಿತ್ತಾಪುರ: ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದಿರುವ '2025ರ ಊರ್ಜಿತಗೊಳಿಸುವಿಕೆ ಕಾಯ್ದೆ ಪಿಂಚಣಿದಾರರ ನಡುವೆ ತಾರತಮ್ಯ ಉಂಟು ಮಾಡುತ್ತಿದ್ದ...