ಮಂಗಳವಾರ, ಮೇ 27, 2025

ಮರ ಕಟಾವು ಮಾಡಿದ ಸ್ಥಳಕ್ಕೆ ಅರಣ್ಯಾಧಿಕಾರಿ ಭೇಟಿ.

ಮರ ಕಟಾವು ಮಾಡಿದ ಸ್ಥಳಕ್ಕೆ ಅರಣ್ಯಾಧಿಕಾರಿ ಭೇಟಿ.

ಚಿತ್ತಾಪುರ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಸೋಮವಾರ ಅನುಮತಿ ಪಡೆಯದೆ ಮರ ಕಟಾವು ಮಾಡಿದ ವಿಷಯ ತಿಳಿದು ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ವಿಜಯಕುಮಾರ ಬಡೀಗೇರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಅವರು ಎಪಿಎಂಸಿ ಕಾರ್ಯದರ್ಶಿ ಅನುಮತಿ ಕೋರಿ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದರು ಇನ್ನೂ ನಮ್ಮ ಇಲಾಖೆಯಿಂದ ಅನುಮತಿ ನೀಡಿರಲಿಲ್ಲ ಈಗ ಏಕಾಏಕಿ ಮರ ಕಡಿದ ವಿಷಯ ತಿಳಿದುಬಂದಿದೆ ಈ ಕುರಿತು ಕೊಡಲೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ಮೊಹಮ್ಮದ್ ಜಾವೀದ್, ಅರಣ್ಯ ವೀಕ್ಷಕ ಸವಿತಾ ಸೇರಿದಂತೆ ಇತರರು ಇದ್ದರು.

ಸೋಮವಾರ, ಮೇ 26, 2025

ಮರಕ್ಕೆ ಕೊಡಲಿ, ಎಪಿಎಂಸಿ ಮತ್ತು ಅರಣ್ಯ ಇಲಾಖೆ ಜಾಣಮೌನ.

ಜಗದೇವ ಎಸ್ ಕುಂಬಾರ.
ಚಿತ್ತಾಪುರ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಹಾಡು ಹಗಲೇ ಮರಗಳು ಧರೆಗೆ ಉರಳಿಸುತ್ತಿದ್ದರೂ ಯಾರೂ ಕೇಳುವರಿಲ್ಲದಂತಾಗಿದೆ ಎಪಿಎಂಸಿ ಮತ್ತು ಅರಣ್ಯ ಅಧಿಕಾರಿಗಳು ಜಾಣಮೌನಕ್ಕೆ ಜಾರಿದ್ದು ನೋಡಿದರೆ ಇನ್ನೂ ಅದೆಷ್ಟೋ ಮರಳು ನೆಲಕ್ಕೆ ಉರುಳುತ್ತವೆ ಎಂಬ ಚಿಂತೆ ಸಾರ್ವಜನಿಕರಲ್ಲಿ ಚರ್ಚೆ ಆಗುತ್ತಿದೆ.

ಸುಮಾರು 50ಕ್ಕೂ ಅಧಿಕ ವರ್ಷಗಳ ಹಳೆಯದಾದ ಬೆಲೆಬಾಳುವ ಮರಗಳು ಕಡಿಯುತ್ತಿರುವುದು ನೋಡಿದರೆ ಎಪಿಎಂಸಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಮೌನ ಹಲವಾರು ಗುಮಾನಿಗೆ ಎಡೆ ಮಾಡಿಕೊಟ್ಟಿದೆ ಎಂದು ಜನರು ದೂರುತ್ತಿದ್ದಾರೆ. ಕಾನೂನಿನ ಯಾವುದೇ ಅಳಕು ಅಂಜಿಕೆಯಿಲ್ಲದೆ ಗಿಡ, ಮರಗಳನ್ನು ಅವ್ಯಾಹತವಾಗಿ ಕಡಿಯುವ ದುಷ್ಕರ್ಮಿಗಳ ಅಟ್ಟಹಾಸ ಮುಂದುವರೆದಿದೆ.

ಕಾಡು ಬೆಳೆಸಿ ನಾಡು ಉಳಿಸಿ ಎಂದು ಅರಣ್ಯ ಇಲಾಖೆ ಘೋಷಣೆ ಕೇವಲ ದಾಖಲೆಯಲ್ಲಿ ಮಾತ್ರ ಉಳಿದಿದೆ. ಅನುಷ್ಠಾನದಲ್ಲಿ ಜಾರಿಯಾಗಿಲ್ಲ ಎಂಬುದಕ್ಕೆ ಸಾಕ್ಷಿಗಳು ಸಾಕಷ್ಟು ಸಿಗಲಿವೆ. ಸರಕಾರ ಇಲ್ಲಿನ ಗಿಡ ಮರಗಳ ರಕ್ಷಣೆಗೆ ಈಗಲಾದರೂ ಎಚ್ಚೆತ್ತು ತುರ್ತು ಕ್ರಮ ಕೈಗೂಳ್ಳಬೇಕು. ಇರದಿದ್ದರೆ ಜನ ಹೋರಾಟ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ದಿನಕ್ಕೆ ಒಂದೆರಡರಂತೆ ನಿತ್ಯ ಮರಗಳ ಮಾರಣ ಹೋಮ ನಡೆಸಿದರೆ ಹೀಗೆ ಬಿಟ್ಟರೆ ಕೆಲ ದಿನದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿನ ಎಲ್ಲ ಹಸಿರು ಸಂಪತ್ತು ನಾಶವಾಗಲಿದೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತ ಪಡಿಸಿದ್ದಾರೆ.

ನಮ್ಮ ವ್ಯಾಪ್ತಿಗೆ ಒಳಪಡುವ ಎಪಿಎಂಸಿಯಲ್ಲಿ ಮರಗಳು ಕಡಿದಿದ್ದು ನಮ್ಮ ಗಮನಕ್ಕೆ ಇಲ್ಲ ಒಂದು ವೇಳೆ ಮರಗಳು ಕಡಿದಿದ್ದು ನಿಜವಾಗಿದ್ದರೆ ನಾನು ಕ್ರಮ ಕೈಗೊಳ್ಳುವೆ ನಮ್ಮ ಇಲಾಖೆಯಿಂದ ಯಾವುದೇ ರೀತಿಯ ಮರಗಳು ಕಡಿಸಲು ಸೂಚಿಸಿಲ್ಲ ಎಂದರು.

- ಶ್ರೀಮತಿ ಸವಿತಾ ಘೋನಿ.
ಕಾರ್ಯದರ್ಶಿ,ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚಿತ್ತಾಪೂರ.

ಎಪಿಎಂಸಿಯಲ್ಲಿ ಯಾವುದೇ ರೀತಿಯ ಒಪ್ಪಿಗೆ ಪರವಾನಿಗೆ ಇರದೆ ಬೆಳಿಗ್ಗೆ ಮರ ಕಡಿದ ವಿಷಯ ತಿಳಿದು ಬಂದಿದೆ ಕೂಡಲೆ ಮರ ಕಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಳೀಯ ಪಂಚನಾಮೆ ಮಾಡಿಕೊಳ್ಳಲಾಗಿದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

- ಮಹಮ್ಮದ್ ಜಾವೀದ್
ಉಪ ವಲಯ ಅರಣ್ಯಾಧಿಕಾರಿ ಚಿತ್ತಾಪೂರ.



ಶುಕ್ರವಾರ, ಮೇ 23, 2025

ಈ ರಸ್ತೆಗೆ ಸಂಚರಿಸಿದರೆ ಜೀವದ ಭಯ.ಕಿರಿದಾದ ರಸ್ತೆ, ರಸ್ತೆ ಉದ್ದಕ್ಕೂ ತಗ್ಗು ಗುಂಡಿಗಳು, ದಿನ ಒಂದಲ್ಲ ಒಂದು ಘಟನೆ.

-ಜಗದೇವ ಎಸ್ ಕುಂಬಾರ.
ಚಿತ್ತಾಪುರ: ಪಟ್ಟಣದ ಹೊರವಲಯದಿಂದ ರಾವೂರ ಹೋಗುವ 6 ಕಿಲೋ ಮೀಟರ್ ಡಾಂಬರೀಕರಣ ರಸ್ತೆಯು ಸುಮಾರು ವರ್ಷಗಳಿಂದ ಕಿರಿದಾದ ರಸ್ತೆಯಾಗಿದ್ದು, ಈಗ ಆ ರಸ್ತೆ ಉದ್ದಕ್ಕೂ ಅಲ್ಲಿಲ್ಲಿ ತಗ್ಗು-ಗುಂಡಿಗಳು ನಿರ್ಮಾಣವಾಗಿದ್ದು, ಬೆಳಿಗ್ಗೆಯಿಂದ ರಾತ್ರಿವರೆಗೆ ಒಂದಲ್ಲ ಒಂದು ವಾಹನ ಸವಾರರ ಮಧ್ಯ ಸಣ್ಣಪುಟ್ಟ ಘಟನೆಗಳು ಸಂಭವಿಸುತ್ತಿದ್ದು, ಈಗಾಗ್ಲೇ ಸಾಕಷ್ಟು ಜೀವ ಹಾನಿಗಳು ಆಗಿದ್ದು, ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಜೀವದ ಭಯ ಉಂಟಾಗುತ್ತಿದೆ ಎನ್ನುತ್ತಾರೆ.
ಈ ರಸ್ತೆ ಮೇಲೆ ಎದುರಿನಿಂದ ಬರುವ ವಾಹನಗಳಿಗೆ ಇನ್ನೊಂದು ವಾಹನ ಜಾಗ ಬಿಡದಿದ್ದರೆ ವಾಹನ ನೆಲಕಚ್ಚುವ ಸಾಧ್ಯತೆಗಳೇ ಹೆಚ್ಚಾಗಿವೆ. ಎದುರಿನಿಂದ ಬರುವ ವಾಹನಗಳಿಗೆ ಜಾಗ ಬಿಡಲು ಸಾಧ್ಯವಾಗದಷ್ಟು ರಸ್ತೆ ಇಕ್ಕಟ್ಟಾಗಿದೆ. ಇದರಿಂದಾಗಿ ಅನೇಕ ಬಾರಿ ಬೈಕ್ ಸವಾರರು ತೊಂದರೆ ಅನುಭವಿಸಿದ ಉದಾಹರಣೆಗಳಿವೆ ಎಂದು ತಮ್ಮ ಮನದಾಳದ ಮಾತು ಹೇಳುತ್ತಿದ್ದಾರೆ.
ರಸ್ತೆಗಳ ದುರಸ್ತಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ವಿವಿಧ ಯೋಜನೆಯಡಿ ಕೋಟ್ಯಾಂತರ ರೂ. ಅನುದಾನ ನೀಡುತ್ತಿದೆ. ಆದರೆ ಈ ರಸ್ತೆಗೆ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕಾದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿಷ್ಕಾಳಜಿಯಿಂದ ರಸ್ತೆ ಮಾತ್ರ ಹಾಗೇ ಉಳಿಯುವಂತಾಗಿದೆ. ಒಟ್ಟಿನಲ್ಲಿ ಹದಗೆಟ್ಟ ಕಿರಿದಾದ ರಸ್ತೆಯ ದುಃಸ್ಥಿತಿಯಿಂದ ಚಿತ್ತಾಪುರ ಸುತ್ತ ಮುತ್ತಲಿನ ಗ್ರಾಮಸ್ಥರು ನಿತ್ಯ ಹಿಡಿಶಾಪ ಹಾಕುತ್ತಾ ಓಡಾಡುವಂತಾಗಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ರಸ್ತೆ ಬಗ್ಗೆ ನಿರ್ಲಕ್ಷ್ಯತನ ಬಿಟ್ಟು ಶೀಘ್ರ ರಸ್ತೆ ನಿರ್ಮಾಣ ಕಾರ್ಯಕ್ಕೆ ಮುಂದಾಗಬೇಕಿದೆ ಎಂದರು.

ಜನ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ರಸ್ತೆ ತೀರ ಕಿರಿದಾಗಿದ್ದು, ರಸ್ತೆಯ ಮಧ್ಯ ಭಾಗದಲ್ಲಿ ತಗ್ಗು-ಗುಂಡಿಗಳು ಬಿದ್ದು ಹಾಳಾಗಿದ್ದರಿಂದ ವಾಹನಗಳು ಸರ್ಕಸ್ ಮಾಡುತ್ತ ಚಲಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಡಾಂಬರೀಕರಣ ಕಿತ್ತು ಹೋಗಿದ್ದರಿಂದ ಅಲ್ಲಲ್ಲಿ ಕಂಕರ್ ಕಲ್ಲುಗಳು ಮೇಲೆದ್ದು ಕೆಲವು ಕಡೆ ಗುಂಡಿಗಳು ನಿರ್ಮಾಣವಾಗಿವೆ ಎನ್ನುತ್ತಾರೆ.

- ವೆಂಕಟೇಶ ರಾಠೋಡ್
 ಕರವೇ (ಸ್ವಾಭಿಮಾನಿ ಬಣ)ಕಾರ್ಯಕರ್ತರು ಚಿತ್ತಾಪೂರ.

===================================

ಇಂದು ಬೆಳಗಿನ ಜಾವ ಓರಿಯಂಟ್ ಸಿಮೆಂಟ್ ಕಂಪೆನಿಯಲ್ಲಿ ಸೆಕ್ಯೂರಿಟಿ ಕೆಲಸಕ್ಕೆ ಹೋಗುತ್ತಿದ್ದ ರಾವೂರ ಗ್ರಾಮದ ರಾಜಕುಮಾರ ಶೆಟ್ಟಿ ಎನ್ನುವ ನಿವಾಸಿ ಇದೇ ಇಕ್ಕಟ್ಟಾದ ರಸ್ತೆಯಲ್ಲಿ ನಿಂತಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದ ಘಟನೆ ನಡೆದಿದೆ.

-ಮಹೇಶ ಬಾಳಿ
ರಾವೂರ ಗ್ರಾಮಸ್ಥರು.

ರಕ್ಷಣೆ ನೀಡುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲ: ಸಜ್ಜನಶೆಟ್ಟಿ ಆಕ್ರೋಶ.

ಚಿತ್ತಾಪುರ: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ರಕ್ಷಣೆ ನೀಡುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳದಲ್ಲಿ 400-500 ಜನ ಪೊಲೀಸರು ಮತ್ತು ಜಿಲ್ಲೆಯ ಎಲ್ಲಾ ಹಂತದ ಪೊಲೀಸ್‌ ಅಧಿಕಾರಿಗಳು ಇದ್ದರೂ ಛಲವಾದಿ ನಾರಾಯಣಸ್ವಾಮಿ ಅವರಿಗೆ ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದಾರೆ ಪೊಲೀಸರೇ ಹೆದರಿಸಿ ಬೆದರಿಸಿ ಸಚಿವರ ಕ್ಷಮೆ ಕೋರುವಂತೆ ಒತ್ತಡ ಹೇರಿದ್ದಾರೆ ಎಂದು ಹೇಳಿದರು. ತಿರಂಗಾ ಯಾತ್ರೆಯಲ್ಲಿ ಛಲವಾದಿ ನಾರಾಯಣಸ್ವಾಮಿ ಭಾಗಿಯಾಗದಂತೆ ಪೊಲೀಸರು ಮತ್ತು ಗುಂಡಾಗಳು ಸೇರಿ ಮೊದಲೇ ಪ್ರೀಪ್ಲಾನ್ ಮಾಡಿದ್ದರು ಎಂದರು.

ಅಪರೇಷನ್‌ ಸಿಂಧೂರ ಯಶಸ್ವಿಯಾದ ಹಿನ್ನಲೆಯಲ್ಲಿ ಭಾರತೀಯ ಸೈನಿಕರಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೈತಿಕ ಬೆಂಬಲ ನೀಡಲು ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ವೇದಿಕೆ ವತಿಯಿಂದ ಪಟ್ಟಣದಲ್ಲಿ ಬುಧವಾರ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು ಇದೊಂದು ಪಕ್ಷಾತೀತವಾಗಿ ಕಾರ್ಯಕ್ರಮವಾಗಿತ್ತು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗಮಿಸಿದ್ದರು ಇದನ್ನು ಸಹಿಸಿಕೊಳ್ಳದ ಕಾಂಗ್ರೆಸ್‌ ಪಕ್ಷದ ಮರಳು ಮಾಫಿಯಾ, ಲಿಕ್ಕರ್ ಮಾಫಿಯಾ ಹಾಗೂ ರೌಡಿ ಶೀಟರ್ ಗಳು ಗಂಡಾಗಳ ಜೊತೆಗೆ ಪೊಲೀಸರು ಸೇರಿ ಪ್ರವಾಸಿ ಮಂದಿರದಲ್ಲಿ ಐದಾರು ತಾಸು ದಿಬ್ಬಂಧನ ಮಾಡಿ ಟಾರ್ಚರ್ ನೀಡಿದ್ದಾರೆ. ಪೊಲೀಸರು ತಮ್ಮ ಸೇವೆ ಮರೆತು ಗುಲಾಮರಂತೆ ವರ್ತಿಸಿ ಸಚಿವರ ಕಾವಲುಗಾರರಾಗಿದ್ದಾರೆ, ಅವರು ಪೊಲೀಸ್‌ ಇಲಾಖೆಯಲ್ಲಿರಲು ಲಾಯಕ್ಕಿಲ್ಲ, ತಿರಂಗಾ ಯಾತ್ರೆಯಲ್ಲಿ ಛಲವಾದಿ ನಾರಾಯಣಸ್ವಾಮಿ ಭಾಗಿಯಾಗದಂತೆ ನೋಡಿಕೊಳ್ಳುವುದು ಹಾಗೂ ಯಾತ್ರೆ ಹಾಳು ಮಾಡುವುದೇ ಅವರ ಉದ್ದೇಶವಾಗಿತ್ತು. ಅಂಬೇಡ್ಕ‌ರ್ ದೇಶಕ್ಕೆ ಸಂವಿಧಾನ ಬರೆದರೆ ಪ್ರಿಯಾಂಕ್ ಖರ್ಗೆ ಚಿತ್ತಾಪುರಕ್ಕೆ ರಿಪಬ್ಲಿಕ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕ‌ರ್ ಮಾತನಾಡಿ, ಶಾಂತಿ, ಪ್ರೀತಿ ವಿಶ್ವಾಸಕ್ಕೆ ಹೆಸರಾದ ಚಿತ್ತಾಪುರದಲ್ಲಿ ಗುಂಡಾ ಪ್ರವೃತ್ತಿ ನಡೆದಿರುವುದು ಖಂಡನೀಯ. ನಮ್ಮೆದುರು ಯಾರು ಮಾತನಾಡಬಾರದು ಯಾರು ಬೆಳೆಯಬಾರದು ಎನ್ನುವ ಸಂಸ್ಕೃತಿ ಗುರುಮಠಕಲ್ ನಲ್ಲಿತ್ತು ಅದು ಈಗ ಚಿತ್ತಾಪುರದಲ್ಲಿ ತಂದಿದ್ದಾರೆ. ಬಿಜೆಪಿಯಲ್ಲಿ ದಲಿತರ ಬೆಳವಣಿಗೆ ಸಚಿವ ಪ್ರಿಯಾಂಕ್ ಖರ್ಗೆ ಸಹಿಸುತ್ತಿಲ್ಲ ಇದಕ್ಕೆ ಅಂಬಾರಾಯ ಅಷ್ಠಗಿ ಮೇಲೆ ಗುಂಡಾಗಿರಿ ನಡೆಸಿರುವುದೇ ಸಾಕ್ಷಿ ಎಂದು ಹೇಳಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹಗುರವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಆಗ ನಮ್ಮ ನಾಯಕರು ಮಾದ್ಯಮ ಮೂಲಕ ಕೌಂಟರ್ ನೀಡಿದ್ದರು ಹಾಗೆ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆಗೆ ಕೌಂಟ‌ರ್ ನೀಡುವುದನ್ನು ಬಿಟ್ಟು ಗುಂಡಾಗಿರಿ ಮಾಡಿ ಭಯದ ವಾತಾವರಣ ನಿರ್ಮಾಣ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಕಿಡಿ ಕಾರಿದರು.

ಸಂವಿಧಾನಿಕ ಹುದ್ದೆಯಲ್ಲಿದ್ದ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಕಾಂಗ್ರೆಸ್ ಮುಖಂಡರು ಅಶ್ಲೀಲ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರೂ ಸಹ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ, ಛಲವಾದಿ ನಾರಾಯಣಸ್ವಾಮಿ ಹೇಳಿಕೆ ತಪ್ಪಾಗಿದ್ದರೆ ಮಾನನಷ್ಟ ಮೊಕದ್ದಮೆ ಹಾಕಲಿ ಅದನ್ನು ಬಿಟ್ಟು ಗುಂಡಾಗಳಿಗೆ ಬಿಟ್ಟು ಗುಂಡಾಗಿರಿ ನಡೆಸುವುದಕ್ಕೆ ಕುಮ್ಮಕ್ಕು ನೀಡಿದ್ದೆ ಸಚಿವ ಪ್ರಿಯಾಂಕ್ ಖರ್ಗೆ ಕಾರಣ ಎಂದು ಆಪಾದಿಸಿದರು.

-ಚಂದ್ರಶೇಖರ ಅವಂಟಿ
ಬಿಜೆಪಿ ಹಿರಿಯ ಮುಖಂಡ ಚಿತ್ತಾಪೂರ.

=====================================

ಚಿತ್ತಾಪುರದಲ್ಲಿ ಪೊಲೀಸರ ಗುಂಡಾ ವರ್ತನೆ ಹೆಚ್ಚಾಗಿದೆ, ಭಾರತ್ ಮಾತಾ ಕೀ ಜೈ ಎನ್ನುವರನ್ನು ತಡೆಹಿಡಿದ ಪೊಲೀಸರು ಛಲವಾದಿ ನಾರಾಯಣಸ್ವಾಮಿ ವಿರುದ್ಧ ಅಸಂವಿಧಾನಿಕ ಪದಗಳ ಬಳಕೆ ಮಾಡಿ ನಿಂದಿಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಕೂಡಲೇ ಕೈಗೊಳ್ಳಬೇಕು ಎಂದರು.
 
-ಮಲ್ಲಿಕಾರ್ಜುನ ಎಮ್ಮೆನೋ‌ರ್
ಜಿಲ್ಲಾಧ್ಯಕ್ಷರು,ಬಿಜೆಪಿ ಹಿಂದುಳಿದ ವರ್ಗಗಳ ಚಿತ್ತಾಪುರ.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ ಹೂಗಾರ, ಮಲ್ಲಿಕಾರ್ಜುನ ಇಟಗಿ, ಸುರೇಶ್ ಬೆನಕನಳ್ಳಿ, ಶಿವರಾಮ ಚವ್ಹಾಣ, ರಮೇಶ್ ಕಾಳನೂರು ಇದ್ದರು

ಬುಧವಾರ, ಮೇ 21, 2025

ಕಾಂಗ್ರೆಸ್ ನಿಂದ ಮಿಂಚಿನ ಪ್ರತಿಭಟನೆ, ಛಲವಾದಿ ನಾರಾಯಣಸ್ವಾಮಿ ಕ್ಷಮೆಯಾಚನೆಗೆ ಆಗ್ರಹ, ತಿರಂಗಾ ಯಾತ್ರೆ ವೇದಿಕೆ ಕಾರ್ಯಕ್ರಮ ರದ್ದು.

ಚಿತ್ತಾಪುರ: ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಲಬುರಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಆನೆ ಹೋಗುವಾಗ ನಾಯಿಗಳು ಬೂಗಳುತ್ತವೆ ಎಂದಾಗ ಆನೆ, ನಾಯಿ ಯಾರು ಪ್ರಶ್ನಿಸಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಆನೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಾಯಿಗೆ ಹೋಲಿಕೆ ಮಾಡಿ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಟ್ಟಣದಲ್ಲಿ ಮಿಂಚಿನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ತಿರಂಗಾ ಯಾತ್ರೆಯಲ್ಲಿ ಭಾಗವಹಿಸಲು ಬುಧವಾರ ಚಿತ್ತಾಪುರ ಪಟ್ಟಣಕ್ಕೆ ಆಗಮಿಸಿದ ಛಲವಾದಿ ನಾರಾಯಣಸ್ವಾಮಿ ಪ್ರವಾಸಿ ಮಂದಿರದಲ್ಲಿ ಇರುವ ವಿಷಯ ತಿಳಿಯುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡರು ಪ್ರವಾಸಿ ಮಂದಿರಕ್ಕೆ ಮುತ್ತಿಗೆ ಹಾಕಿ ಛಲವಾದಿ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

ಈ ಮಧ್ಯೆ ಕಾಂಗ್ರೆಸ್ ಮುಖಂಡರು ಪ್ರವಾಸಿ ಮಂದಿರದ ಗೇಟ್ ತೆರೆದು ಒಳನುಗ್ಗುವ ಪ್ರಯತ್ನ ಮಾಡಿದಾಗ ಪೊಲೀಸ್ ಅಧಿಕಾರಿಗಳು ಪ್ರತಿಭಟನೆ ನಿರತ ಕಾಂಗ್ರೆಸ್ ಕಾರ್ಯಕರ್ತರನ್ನು ಹೊರಹಾಕಿ ಗೇಟ್ ಬಂದ್ ಮಾಡಿದರು. ಗೇಟ್ ಮುಂದೆ ಕುಳಿತುಕೊಂಡು ಕಾಂಗ್ರೆಸ್ ಮುಖಂಡರು ಹೋರಾಟ ಮುಂದುವರೆಸಿದರು. ಪ್ರವಾಸಿ ಮಂದಿರದಲ್ಲಿದ್ದ ಛಲವಾದಿ ನಾರಾಯಣಸ್ವಾಮಿ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕ್ಷಮೆ ಯಾಚಿಸಬೇಕೆಂದು ಪಟ್ಟುಹಿಡಿದಿದ್ದಾರೆ.

ಈ ಹೋರಾಟ ಮುಂದೆ ಯಾವ ರೂಪ ಪಡೆಯಲಿದೆ ಎಂಬುದು ಕಾದುನೋಡಬೇಕಿದೆ. ಸ್ಥಳದಲ್ಲಿ ಹೆಚ್ಚುವರಿ ಎಸ್ಪಿ ಮಹೇಶ ಮೇಗಣ್ಣ, ಡಿವಾಯ್ಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಚಂದ್ರಶೇಖರ ತಿಗಡಿ, ನಟರಾಜ್ ಲಾಡೆ, ಜಗದೇವ ಪಾಳಾ, ಪಿಎಸ್‌ಐಗಳಾದ ಶ್ರೀಶೈಲ್ ಅಂಬಾಟಿ, ಸೇರಿದಂತೆ ಪೊಲೀಸರು ಸ್ಥಳದಲ್ಲಿದ್ದಾರೆ.

ಚಿತ್ತಾಪುರ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ರವರಿಗೆ ಅನುವು ಮಾಡಿಕೋಡಿ ಎಂದು ಬಿಜೆಪಿ ಕಾರ್ಯಕರ್ತರು ಪೋಲಿಸ ಅಧಿಕಾರಿಗಳ ಜೊತೆಗೆ ಮಾತಿನ ಸಂಘರ್ಷ ನಡೆಯಿತ್ತು.

ಕಲಬುರಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಆನೆ ಹೋಗುವಾಗ ನಾಯಿಗಳು ಬೂಗಳುತ್ತವೆ ಎಂಬ ವಿಷಯಕ್ಕೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮಾಡುವ ಪ್ರತಿಭಟನೆಗೆ ನಾನು ಉತ್ತರ ನೀಡಲ್ಲ, ನನ್ನಗೂ ಪ್ರಿಯಾಂಕ್ ರವರಿಗೆ ಸಂಬಂಧಿಸಿದ್ದು ಅವರು ಬೇಕಿದ್ದರೆ ನನ್ನ ಮೇಲೆ ಕೇಸು ದಾಖಲೆ ಮಾಡಲಿ ಎಂದು ಉತ್ತರಿಸಿದರು. ಸ್ಥಳದಲ್ಲಿ ಕ್ಷಮೆಯಾಚನೆಗೆ ಒತ್ತಾಯಿಸಿದರೆ ನಾನು ಪ್ರವಾಸಿ ಮಂದಿರದ ವಾಸ್ತವ್ಯ ಮಾಡುವುದಾಗಿ ಹೇಳಿದರು.

- ಛಲವಾದಿ ನಾರಾಯಣಸ್ವಾಮಿ
ವಿಧಾನ ಪರಿಷತ್ ವಿಪಕ್ಷ ನಾಯಕ.

ಕೆಲ ಕಾರ್ಯಕರ್ತೆರು ಪ್ರವಾಸಿ ಮಂದಿರಕ್ಕೆ ನುಗ್ಗಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಕಾರಿಗೆ ಬಣ್ಣ ಎರಚಿದರು.
ನಂತರ ಪೋಲಿಸರು ಅವರನ್ನು ಸಮಾಧಾನ ಮಾಡಿ ಕಳುಹಿಸಿದ ಘಟನೆ ನಡೆಯಿತ್ತು.

ಮಂಗಳವಾರ, ಮೇ 13, 2025

ಗ್ರಾಮೀಣ ಭಾಗದ 87 ಹಳ್ಳಿಗಳ ಅಭಿವೃದ್ದಿಗೆ ಕ್ರಿಯಾಯೋಜನೆ ಸಿದ್ದ: ಪ್ರಿಯಾಂಕ್ ಖರ್ಗೆ.

ಚಿತ್ತಾಪುರ: ಮತಕ್ಷೇತ್ರದ ಗ್ರಾಮೀಣ ಭಾಗದ ಹಳ್ಳಿಗಳ ಅಭಿವೃದ್ದಿಗಾಗಿ 150 ಕೋಟಿ ರೂಪಾಯಿ ವೆಚ್ಚದ ಕ್ರಿಯಾ ಯೋಜನೆ ಈಗಾಗಲೇ ಸಿದ್ದವಾಗಿದೆ. ಇದರ ಅಡಿಯಲ್ಲಿ 87 ಹಳ್ಳಿಗಳಿಗೆ ಅಗತ್ಯ ಅನುದಾನ ಲಭ್ಯವಾಗಲಿದ್ದು ಮುಂದಿನ ಹದಿನೈದು ದಿನಗಳಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ‌ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಪಟ್ಟಣದ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 
ಅಮೃತ್ ಯೋಜನೆಯಡಿಯಲ್ಲಿ ಚಿತ್ತಾಪುರ ಹಾಗೂ ವಾಡಿ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆಗೆ ಅಡಿಗಲ್ಲು, ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಕ್ರೀಡಾಂಗಣ ಉದ್ಘಾಟನೆ ಸೇರಿದಂತೆ ರೂ 86.79 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು ಮೂಲಭೂತ ಸೌಕರ್ಯ, ಕುಡಿಯುವ ನೀರು ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತಿದ್ದು ಮತ್ತು 25 ಕೋಟಿ ರೂಪಾಯಿ ವೆಚ್ಚದಲ್ಲಿ ಗುಂಡಗುರ್ತಿ ಬಳಿ ಸೋಲಾರ್ ಎನರ್ಜಿ ವಿದ್ಯುತ್ ಉತ್ಪಾದನಾ ಕೆಂದ್ರ ಸ್ಥಾಪಿಸಲಾಗುತ್ತಿದೆ. ಪ್ರಗತಿ ಪಥ ಹಾಗೂ ಕಲ್ಯಾಣ ಪಥ ಯೋಜನೆಗಳ ಅಡಿಯಲ್ಲಿ ಜಿಲ್ಲೆಯ ರಸ್ತೆ ಅಭಿವೃದ್ದಿ ಪಡಿಸಲಾಗುತ್ತಿದೆ. ಜೊತೆಗೆ ವಾಡಿ ಹಾಗೂ ಚಿತ್ತಾಪುರ ಪಟ್ಟಣದ ಅಭಿವೃದ್ದಿಗೆ ನೀಲ ನಕ್ಷೆ ತಯಾರಿಸಲಾಗುತ್ತಿದೆ‌ ಎಂದರು.
ಗ್ರಾಮೀಣಾಭಿವೃದ್ಧಿ ಇಲಾಖೆ ಅಡಿಯಲ್ಲಿ ಕೈಗೊಂಡ ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದ ಸಚಿವರು, ರಾಜ್ಯಾದ್ಯಂತ 5,770 ಅರಿವು ಕೇಂದ್ರಗಳನ್ನು ಸ್ಥಾಪಿಸಿ ಗ್ರಾಮೀಣ ಭಾಗದ ಯುವಕ ಯುವತಿಯರಿಗಾಗಿ ಜ್ಞಾನಾರ್ಜನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಈ ಸಲ ಒಟ್ಟು 1,281 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದೆ. ಇದು ದಾಖಲೆಯ ಸಂಗ್ರಹವಾಗಿದೆ. ನರೇಗಾ ಯೋಜನೆಯಡಿಯಲ್ಲಿ ತಾಯಂದಿರು ಕೆಲಸ ಮಾಡಲು ಹೋದಾಗ ಅವರ ಮಕ್ಕಳನ್ನು ಬಿಟ್ಟು ಹೋಗಲು 3,867 ಕೂಸಿನ ಮನೆ ಗಳನ್ನು ಸ್ಥಾಪಿಸಲಾಗಿದ್ದು ಅಲ್ಲಿ ಸುಮಾರು 50,000 ಮಕ್ಕಳನ್ನು ಆರೈಕೆ ಮಾಡಲಾಗುತ್ತಿದೆ ಎಂದರು.

ರೈತರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 9 ಗ್ರಾಹಕ ಬಾಡಿಗೆ ಸೇವಾ ಕೇಂದ್ರ ಸ್ಥಾಪನೆ ಮಾಡಿದ್ದು ಕೃಷಿ ಚಟುವಟಿಕೆ ನಡೆಸಲು ಬಾಡಿಗೆ ಆಧಾರದ ಮೇಲೆ ಕೃಷಿ ಯಂತ್ರೋಪಕರಣಗಳನ್ನು ಪಡೆಯಬಹುದಾಗಿದೆ. ಖಾಸಗಿಯವರಿಗೆ ಹೋಲಿಸಿದರೆ ಯಂತ್ರೋಪಕರಣಗಳ ಬಾಡಿಗೆ ಕೂಡಾ ಕಡಿಮೆಯಾಗಿದೆ. ಚಿತ್ತಾಪುರ ತಾಲೂಕಿನಲ್ಲಿ ಇಂತಹ 2 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ರೈತ ಬಾಂಧವರು ಈ ಕೇಂದ್ರಗಳ ಅನುಕೂಲ ಪಡೆದುಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.
ಕ್ಷೇತ್ರದ ಶಾಸಕ ಹಾಗೂ ಸಚಿವನಾಗಿ ನಿಮ್ಮ ಕೆಲಸ ಮಾಡುವುದು ನನ್ನ ಧರ್ಮ. ಮೂಲಭೂತ ಸೌಕರ್ಯ, ಶೈಕ್ಷಣಿಕ ಪ್ರಗತಿ ಸೇರಿದಂತೆ ನೀರಾವರಿ ಯೋಜನೆಗಳ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಶಕ್ತಿ‌ ಮೀರಿ ಅಭಿವೃದ್ದಿ ಕೆಲಸ ಮಾಡಿದ್ದೇನೆ. ನೀವು ಎಷ್ಟು ಶಕ್ತಿ ತುಂಬುತ್ತಿರೋ‌ ಮತ್ತಷ್ಟು ಕೆಲಸ ಮಾಡುತ್ತೇನೆ. ನೀವು ಮಾಡುವ ಮತದಾನದ ಮೌಲ್ಯ ಅರಿತುಕೊಳ್ಳಬೇಕು ಎಂದು‌ ಮನವಿ ಮಾಡಿದ ಸಚಿವರು ಮತದಾರರ ಆಶೀರ್ವಾದದಿಂದ ಕ್ಷೇತ್ರದಲ್ಲಿ ಅಭಿವೃದ್ದಿಯಾಗುತ್ತಿವೆ. ನಾನು ಯಾವ ಉಪಕಾರ ಮಾಡುತ್ತಿಲ್ಲ ಬದಲಿಗೆ ನಿಮ್ಮ ಋಣ ತೀರಿಸುತ್ತಿದ್ದೇನೆ.

ಮೊದಲ ಬಾರಿಗೆ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವ ಸಂದರ್ಭದಲ್ಲಿ ನಮಗೆ ಟಿಕೇಟ್ ನೀಡಲು ವಿರೋಧ ವ್ಯಕ್ತವಾಗಿತ್ತು. ಪತ್ರಿಕೆಗಳು ಕೂಡಾ ನನ್ನ ಬಗ್ಗೆ ವ್ಯಂಗ್ಯಮಾಡಿ ಹೆಡ್ ಲೈನ್ ಪ್ರಕಟಿಸಿದ್ದವು. ಆ ಸಂದರ್ಭದಲ್ಲಿ ಹಿರಿಯ ನಾಯಕ ಎಸ್ ಆರ್ ಪಾಟೀಲ್ ಐಟಿ‌/ಬಿಟಿ ಸಚಿವರಾಗಿದರು ಆಗ ನನಗೆ ಐಟಿಬಿಟಿ ಸಚಿವನಾಗಿದ್ದಾಗ ಕೆಲವರು ಟಿಕಿಸಿದರು ನನ್ನಗೆ ಏನೂ ಗೋತ್ತಿಲ್ಲ, ನನ್ನಿಂದ ಅಭಿವೃದ್ದಿ ಕೆಲಸಗಳು ಆಗಲ್ಲ ಅಂತಾ ಹೇಳುವರು ಈಗ ಕೆಲ ವರ್ಷಗಳಲ್ಲಿ ಪ್ರಿಯಾಂಕ್ ಅವರನ್ನೇ ಐಟಿ/ಬಿಟಿ ಸಚಿವರನ್ನಾಗಿ ಮಾಡಿ ಎಂದು ಎಲ್ಲರೂ ಒತ್ತಾಯಿಸಿದ್ದರು. ಇದಕ್ಕೆಲ್ಲಾ ನಿಮ್ಮ ಆಶೀರ್ವಾದವೇ ಕಾರಣ ಎಂದು ಖರ್ಗೆ ಹೇಳಿದರು.

ಚಿತ್ತಾಪುರ ಮತ ಕ್ಷೇತ್ರದ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮುಂಬರುವ ದಿನಗಳಲ್ಲಿ ಈ ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಗಳು ಇವೇ ಎಂದರು.

- ತಿಪ್ಪಣ್ಣಪ್ಪ ಕಮಕನೂರು
ಎಂಎಲ್‌ಸಿ ಕಲಬುರಗಿ.

ಬಳ ಚರಂಡಿ ಮಂಡಳಿ ವಿಭಾಗದ ನರಸಿಂಹರೆಡ್ಡಿ ಎನ್, ಎಂಎಲ್‌ಸಿ ಹಾಗೂ ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್, ಮಾಜಿ ಪುರಸಭೆ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಚಂದ್ರಶೇಖರ ಕಾಶಿ, ಬಾಬು ಕಾಶಿ, ಮಾತನಾಡಿದರು.

ಈ ಸಂದರ್ಭದಲ್ಲಿ ಚಂದ್ರಲಾ ಪರಮೇಶ್ವರಿ, ಪುರಸಭೆ ಅಧ್ಯಕ್ಷ ಅನ್ನಪೂರ್ಣ ನಾಗಪ್ಪ, ಜಿಲ್ಲಾಧಿಕಾರಿ‌ ಫೌಜಿಯಾ ತರನ್ನುಮ್, ಸಿಇಒ ಭಂವರ್ ಸಿಂಗ್ ಮೀನಾ, ಎಸ್ ಪಿ ಅಡ್ಡೂರು ಶ್ರೀನಿವಾಸಲು, ಸಹಾಯಕ ಆಯುಕ್ತರಾದ ಪ್ರಭುರೇಡ್ಡಿ, ತಹಸೀಲ್ದಾರ ನಾಗಯ್ಯ ಹೀರೆಮಠ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ್ ಮರಗೋಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಶ್ರೀನಿವಾಸ ಸಗರ, ಶಿವಾನಂದ ಪಾಟೀಲ, ಮಹೆಬೂಬ್ ಸಾಬ್, ಮುಕ್ತರ್ ಪಟೇಲ್, ಮಲ್ಲಿಕಾರ್ಜುನ ಕಾಳಗಿ, ಶ್ರೀಮತಿ ಶೀಲಾ ಕಾಶಿ, ಶರಣಪ್ಪ ನಾಟೀಕಾರ್, ಜಗದೀಶ ಚವ್ಹಾಣ್, ವಿನೋದ ಗುತ್ತೇದಾರ್, ಸಾಬಣ್ಣ ಕಾಶಿ, ಸೇರಿದಂತೆ 
ಇತರರು ಇದ್ದರು. ಪಶು ಇಲಾಖೆ ಶಂಕರ ಕಣ್ಣಿ ಸ್ವಾಗತಿಸಿ, ಸಂತೋಷ ಕುಮಾರ ಶಿರನಾಳ ನಿರೂಪಿಸಿದರು.

ಕಾಣೆಯಾಗಿದ್ದಾರೆ

ಕಲಬುರಗಿ ಜಿಲ್ಲೆ ಶಹಾಬಾದ ತಾಲ್ಲೂಕು ಭಂಕೂರ ಪಟ್ಟಣದ ನಿವಾಸಿ ಮಹಾದೇವಪ್ಪಾ ಜಲವಾದಿ ಇವರ ಹೆಂಡತಿ ಶ್ರೀಮತಿ ಸಾವಿತ್ರಿಬಾಯಿ (41) ವರ್ಷ ಎಂಬಾತಳು ದಿನಾಂಕ 06-05-2025 ರಂದು ಮುಂಜಾನೆ 6 ಗಂಟೆ ಸುಮಾರಿಗೆ  ಮನೆಯಿಂದ ಕಾಣೆಯಾಗಿದ್ದಾರೆ. 

ವೃತ್ತಿ, ಮನೆಗೆಲಸ 4/5 ಅಡಿ ಎತ್ತರ ಸಾಧರಣ ಮೈ ಕಟ್ಟು, ದುಡ್ಡನೆ ಮುಖ, ಗೋಧಿ ಮೈ ಬಣ್ಣ, ಕನ್ನಡ, ಹಿಂದಿ ಮಾತನಾಡಲು ಬರುತ್ತದೆ. ಸುಳಿವು ಯಾರಿಗಾದರೂ ಸಿಕ್ಕಲ್ಲಿ 6360290334 ಈ ಮೊಬೈಲ್‌ ನಂಬರಗೆ  ಸಂಪರ್ಕಿಸಲು ಕೋರಲಾಗಿದೆ.ಅಥವಾ ಸ್ಥಳೀಯ ಪೋಲಿಸ ಠಾಣೆ ತಿಳಿಸಲು ಕೊರಲಾಗಿದೆ.

ಬುಧವಾರ, ಏಪ್ರಿಲ್ 30, 2025

ಪ್ರಪ್ರಥಮ ಪಾರ್ಲಿಮೆಂಟ್ ಸ್ಥಾಪಿಸಿದ್ದು ಬಸವಣ್ಣ: ಸಂಜಯ ಮಾಕಲ್.


ಚಿತ್ತಾಪುರ: ಬ್ರಿಟನ್ ದೇಶದವರು ತಮ್ಮ ಸಂಸತ್
ಪ್ರಥಮ ಎನ್ನುವರು ಆದರೆ ಅದಕ್ಕೂ ಮೊದಲೇ ಕರುನಾಡಿನಲ್ಲಿ ವಿವಿಧ ವರ್ಗಗಳ ಶರಣರ ಅಭಿಪ್ರಾಯ ಪಡೆದು, ಎಲ್ಲರಿಗೂ ಮಾನ್ಯತೆ ನೀಡಿದ ಸಮಾನತೆಯ ಹರಿಕಾರ ಬಸವಣ್ಣನವರು ಜಗತ್ತಿನಲ್ಲಿಯೇ ಪ್ರಪ್ರಥಮ ಪಾರ್ಲಿಮೆಂಟ್ ಅನುಭವ ಮಂಟಪ ನಿರ್ಮಿಸಿದರು ಎಂದು ಉಪನ್ಯಾಸಕ ಸಂಜಯ ಮಾಕಲ್ ಹೇಳಿದರು.

ಪಟ್ಟಣದ ತಹಸೀಲ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 892 ನೇ ಜಯಂತ್ಯೋತ್ಸವ ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು, ದೇಶದಲ್ಲಿ ಆರ್ಯರು ಬರುವ ಮುಂಚೆ ನಮ್ಮಲ್ಲಿ ಒಗ್ಗಟ್ಟು ಇತ್ತು, ಅವರು ಬಂದ ಮೇಲೆ ಒಡೆದು ಆಳ್ತಾ ಇದ್ದಾರೆ, ಅವರು ಒಡೆದು ಆಳುವುದೇ ಧರ್ಮ ಮಾಡಿದ್ದಾರೆ ಎಂದರು.

ಬುದ್ಧ, ಬಸವಣ್ಣ, ಅಂಬೇಡ್ಕ‌ರ್ ಮೂವರು ಜಾತಿ ಪದ್ಧತಿ, ಅಸಮಾನತೆ ವಿರುದ್ಧ ಹೋರಾಡಿದವರು. ಆದರೆ ದುರ್ದೈವ ಇನ್ನೂ ಅದು ಚಾಲ್ತಿಯಲ್ಲಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಕಂಬಳೇಶ್ವರ ಮಠದ ಶ್ರೀ ಸೋಮಶೇಖರ್ ಶಿವಾಚಾರ್ಯರು ಆಶೀರ್ವಚನ ನೀಡಿ, ಪ್ರಪಂಚಕ್ಕೆ ವಚನ ಸಾಹಿತ್ಯ ಸಂಪತ್ತು ಕೊಟ್ಟ ಮಹಾನ್ ಶರಣ ಬಸವಣ್ಣನವರು, ಸಮಾನತೆಯ ಸಮಾಜಕ್ಕಾಗಿ ಜಾತಿ ಪದ್ಧತಿ ನಿರ್ಮೂಲನೆ ಮಾಡಲು ಅವರು ಮಾಡಿದ ಕ್ರಾಂತಿ ಹೊಸ ಬದಲಾವಣೆಗೆ ನಾಂದಿ ಹಾಡಿತು ಎಂದರು.

ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಕಾರ್ಯದರ್ಶಿ ರಮೇಶ ಮರಗೋಳ, ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್, ಸಮಾರಂಭ ಉದ್ಘಾಟಿಸಿದ ತಹಸೀಲ್ದಾ‌ರ್ ನಾಗಯ್ಯ ಹಿರೇಮಠ ಅವರು ಮಾತನಾಡಿದರು. ವೇದಿಕೆಯಲ್ಲಿ ಸಿಪಿಐ ಚಂದ್ರಶೇಖರ ತಿಗಡಿ, ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ರಮೇಶ ಬೊಮ್ಮನಳ್ಳಿ, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಕ್ರಮ್ ಪಾಶಾ, ಆನಂದ ಪಾಟೀಲ ನರಿಬೋಳ, ಶಾಂತಣ್ಣ ಚಾಳಿಕಾರ ಇದ್ದರು.

ಕಾರ್ಯಕ್ರಮದಲ್ಲಿ ಮಲ್ಲರೆಡ್ಡಿ ಗೋಪಸೇನ್, ನಾಗಣ್ಣ ವಡ್ಡಡಗಿ, ಬಸ್ಸಣ್ಣ ತಳವಾರ, ಬಸವರಾಜಗೌಡ ಹೊನ್ನಾಳ, ಬಸವರಾಜ ಕಾಳಗಿ, ಬಸವರಾಜ ಹೂಗಾ‌ರ್, ಚಂದ್ರಶೇಖರ ಉಟಗೂರ, ಬಸವರಾಜ ಸಂಕನೂರ, ಅನಿಲ್‌ ವಡ್ಡಡಗಿ, ಶ್ರೀಕಾಂತ್ ಸುಲೇಗಾಂವ, ನಾಗರಾಜ ಕಡಬೂರ, ನಾಗರಾಜ್ ರೇಷ್ಮೆ, ಪ್ರಸಾದ್ ಅವಂಟಿ, ನಾಗರಾಜ್ ಹೂಗಾರ, ಅಂಬರೀಷ್‌ ಸುಲೇಗಾಂವ್, ಸಾಯಿನಾಥ ನಿಪ್ಪಾಣಿ, ವೀರಸಂಗಪ್ಪ ಸುಲೇಗಾಂವ, ರಾಜು ಬೆಣ್ಣೆ, ಸೋಮು ಟೋಕಾಪೂರ, ರೇವಣಸಿದ್ದಪ್ಪ ಕುರಕೋಟಿ, ಸಿದ್ದು ರಾಜಾಪುರ, ರಮೇಶ ಕಾಳನೂರ ಸೇರಿದಂತೆ ಇತರರು ಇದ್ದರು.

ಸಂತೋಷ ಶಿರಾನಾಳ ನಿರೂಪಿಸಿದರು, ಡಾ. ಶಂಕರ ಕಣ್ಣಿ ಸ್ವಾಗತಿಸಿದರು, ಗ್ರೇಡ್ -2 ತಹಸೀಲ್ದಾ‌ರ್ ರಾಜಕುಮಾರ ಮರತೂರಕರ್ ವಂದಿಸಿದರು.

ಮಂಗಳವಾರ, ಮಾರ್ಚ್ 18, 2025

ಅಪ್ಪು 50ನೇ ಹುಟ್ಟುಹಬ್ಬ ಆಚರಣೆ.

ಚಿತ್ತಾಪುರ: ನಟ ದಿವಂಗತ ಪುನೀತ್ ರಾಜ್ ಕುಮಾರ್ ಅವರ 50ನೇ ಹುಟ್ಟು ಹಬ್ಬವನ್ನು ಅಪ್ಪು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.

ಪಟ್ಟಣದ ಲಾಡ್ಡಿಂಗ್ ಕ್ರಾಸ್ ಹತ್ತಿರ ಕರ್ನಾಟಕ ರಾಜ್ಯ ಭೋವಿ ವಡ್ಡರ ಮಹಾಸಭಾ ತಾಲೂಕ ಅಧ್ಯಕ್ಷ ವೆಂಕಟೇಶ್ ಹರವಾಳ ನೇತೃತ್ವದಲ್ಲಿ ಅಪ್ಪು ಅಭಿಮಾನಿಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರತ್ನ ಪುನೀತ್ ರಾಜಕುಮಾ‌ರ್ ಅವರ ಜನ್ಮ ದಿನದ ಸಮಾರಂಭದಲ್ಲಿ ಕಲಾವಿದ ಬಾಬು ಕಾಶಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲೇ ಬಾಲ ನಟನಾಗಿ ಅಭಿನಯಿಸಿ ನಂತರ ನಾಯಕ ನಟನಾಗಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಹ ಸಿನೇಮಾ ಮಾಡಿದ ಪುನೀತ್ ರಾಜಕುಮಾ‌ರ್ ಅವರು ಚಿತ್ರರಂಗಕ್ಕೆ ಸಲ್ಲಿಸಿದ ಸೇವೆ ಅಮೋಘವಾಗಿದೆ ಹಾಗೂ ಎಲೆಮರೆ ಕಾಯಿಯಂತೆ ಸಲ್ಲಿಸಿದ ಸಮಾಜ ಸೇವೆ ಮೆಚ್ಚುವಂಥದ್ದು ಇಂತಹ ಅಪರೂಪದ ಚಿತ್ರನಟ ಪುನೀತ್ ರಾಜಕುಮಾ‌ರ್ ಅವರ ಹೆಸರನ್ನು ಪಟ್ಟಣದ ಲಾಡ್ಡಿಂಗ್ ಕ್ರಾಸ್ ಗೆ ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.

ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್ ಕೇಕ್ ಕತ್ತರಿಸಿದರು. ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ, ಪುರಸಭೆ ಸದಸ್ಯ ವಿನೋದ ಗುತ್ತೇದಾರ, ರವಿ ವಿಟ್ಕರ್, ರಮೇಶ ಬೋಸಗಿ, ಬಾಬು ಜೆಸಿಬಿ, ತಿಮ್ಮಯ್ಯ ಪವಾರ್, ರಾಜೇಶ್ ಕಾಶಿ, ರಾಮು ಹರವಾಳ, ವಿಠಲ್ ಕಟ್ಟಿಮನಿ, ರವಿ ಇವಣಿ, ಕಾಶಿನಾಥ ಗುತ್ತೇದಾರ, ಆನಂದ್ ಗುತ್ತೇದಾರ, ನಾಗು ಕಲ್ಲಕ್, ಮಧುಸೂದನ್ ಕಾಶಿ, ಚಂದ್ರಶೇಖರ್ ಬಿಎಸ್‌ಎನ್‌ಎಲ್, ವೆಂಕಟೇಶ್ ಕಲಬುರಗಿಕರ್ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ದತ್ತು ಜಾನೆ, ಮಂಜುನಾಥ್ ಕಾಶಿ, ಅಂಕುಶ್ ಕಾಶಿ, ಕಾಶಿ ಇದ್ದರು.

ಗುರುವಾರ, ಮಾರ್ಚ್ 13, 2025

ಚಿತ್ತಾಪುರ: ಅಕ್ರಮ ಮದ್ಯ ವಶ.

ಚಿತ್ತಾಪುರ: ಪಟ್ಟಣದದಲ್ಲಿ ಅಕ್ರಮವಾಗಿ ಮದ್ಯ ಸಾಗಾಣೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ರೂ.75045 ಮೌಲ್ಯದ ಮದ್ಯ ಹಾಗೂ ಒಂದು ಆಟೋ ವಶಕ್ಕೆ ಪಡೆದ ಘಟನೆ ನಡೆದಿದೆ.

ಪಿಎಸ್‌ಐ ಶ್ರೀಶೈಲ ಅಂಬಾಟಿ ಬುಧವಾರ ರಾತ್ರಿ ದಾಳಿ ಮಾಡಿ 650ಎಂಎಲ್ ಪವರ್ ಕೂಲ್ ಸ್ಟ್ರಾಂಗ್ ಬೀರ್ 6 ಬಾಕ್ಸ್ 10800 ರೂಪಾಯಿ, 650ಎಂಎಲ್ ಕಿಂಗ್ ಫಿಶರ್ ಸ್ಟ್ರಾಂಗ್ ಬೀರ್ 5 ಬಾಕ್ಸ್ 11250ರೂಪಾಯಿ, 90ಎಂಎಲ್ ಒರಿಜಿನಲ್ ಚಾಯ್ಸ್ ವಿಸ್ಕಿ 10 ಬಾಕ್ಸ್ 36480 ರೂಪಾಯಿ, 180ಎಂಎಲ್ ಬ್ಯಾಗ ಪೇಪರ್ ವಿಸ್ಕಿ 1 ಬಾಕ್ಸ್ 6912 ರೂಪಾಯಿ, 330 ಎಂಎಲ್ ಕಿಂಗ್ ಫಿಶರ್ ಸ್ಟ್ರಾಂಗ್ ಬೀರ್ 4 ಬಾಕ್ಸ್ 9600 ರೂಪಾಯಿ ಒಟ್ಟು 75045 ರೂಪಾಯಿ ಮೌಲ್ಯದ ಆಕ್ರಮ ಮದ್ಯ ವಶಕ್ಕೆ ಪಡೆಯುವುದರ ಜೊತೆಗೆ ಮದ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹಾಗೂ ಒಂದು ಆಟೋ ವಶಕ್ಕೆ ಪಡೆದುಕೊಂಡಿದ್ದಾರೆ.

ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಬಂಧಿಸಿದ ತನಿಖೆ ಮುಂದುವರೆದಿದೆ ಎನ್ನಲಾಗಿದೆ.

ಶನಿವಾರ, ಮಾರ್ಚ್ 1, 2025

ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ತೆಕ್ಕೆಗೆ.

ಚಿತ್ತಾಪುರ: ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯೆಯರಾದ ಶ್ರೀಮತಿ ಅನ್ನಪೂರ್ಣ ನಾಗಪ್ಪ ಕಲ್ಲಕ್ ನೂತನ ಅಧ್ಯಕ್ಷೆಯಾಗಿ ಮತ್ತು ಶ್ರೀಮತಿ ಆತೀಯಾ ಬೇಗಂ ನಜಮೋದ್ದಿನ್ ಉಪಾಧ್ಯಕ್ಷೆಯಾಗಿ ಆಯ್ಕೆಯಾಗುವ ಮೂಲಕ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ಕಾಂಗ್ರೆಸ್ ತಿಕ್ಕೆಗೆ ಹೋಗಿದೆ.

ಪಟ್ಟಣದ ಪುರಸಭೆ ಕಾರ್ಯಲಯದಲ್ಲಿ ಶುಕ್ರವಾರ ನಡೆದ ಪುರಸಭೆ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಅನ್ನಪೂರ್ಣ ಕಲ್ಲಕ್, ಬಿಜೆಪಿ ಪಕ್ಷದಿಂದ ಸುಶೀಲಾ ದೇವಸುಂಧರ ನಾಮಪತ್ರ ಸಲ್ಲಿಸಿದರು. ಒಟ್ಟು 23 ಸದಸ್ಯರ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಕಲ್ಲಕ್ ಅವರು 18 ಮತಗಳು ಪಡೆಯುವ ಮೂಲಕ ಗೆಲವು ಸಾಧಿಸಿದ್ದಾರೆ. ಬಿಜೆಪಿಯ ಸುಶೀಲಾ ದೇವಸುಂಧರ ಅವರು 5 ಮತಗಳು ಪಡೆದು ಸೋಲು ಅನುಭವಿಸಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಆತೀಯಾ ಬೇಗಂ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾಗಯ್ಯ ಹಿರೇಮಠ ಅವರು ಘೋಷಣೆ ಮಾಡಿದರು.

ಇದೇ ವೇಳೆ ತಹಶೀಲ್ದಾರ್ ನಾಗಯ್ಯ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾ‌ರ್ ಅವರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಿದರು.

ಪುರಸಭೆ ಸದಸ್ಯರಾದ ಚಂದ್ರಶೇಖರ ಕಾಶಿ, ಶೀಲಾ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಪಾಶಾ ಖುರೇಶಿ, ಸುಮಂಗಲಾ ಸಣ್ಣೂರಕರ್, ಬೇಬಿಬಾಯಿ ಜಾಧವ, ವಿನೋದ ಗುತ್ತೇದಾರ, ಕಾಶಿಬಾಯಿ ಬೆಣ್ಣೂರ್, ಜಗದೀಶ ಚವ್ಹಾಣ, ಸಂತೋಷ ಚೌದ್ರಿ, ಶ್ರುತಿ ಪೂಜಾರಿ, ಶ್ರೀನಿವಾಗರೆಡ್ಡಿ ಪಾಲಪ್, ಶಹಾರಾಜ ಬೇಗಂ, ಖಾಜಾಬಿ, ಮಹ್ಮದ್ ರಸೂಲ್ ಮುಸ್ತಫಾ, ಶಿವರಾಜ ಪಾಳೇದ್, ನಾಗರಾಜ ಭಂಕಲಗಿ, ಪ್ರಭು ಗಂಗಾಣಿ, ರಮೇಶ ಬಮ್ಮನಳ್ಳಿ ಶ್ಯಾಮ್ ಮೇಧಾ ಇದ್ದರು.

ವಿಜಯೋತ್ಸವ : ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ನಂತರ ಕಾಂಗ್ರೆಸ್ ಕಚೇರಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು.

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...